
ಪತ್ರಕರ್ತರ ಸುದ್ದಿಯಲ್ಲಿ ಎಂದಿಗೂ ರಾಜಿ ಸಲ್ಲದು : ಆಯೇಷಾ ಖಾನಂ
ಮುಂಬಯಿ, ಸೆ.07: ಸಮತೋಲನ ವರದಿ ಮಾಡುವಿಕೆ, ನ್ಯಾಯಯುತ ಪತ್ರಿಕೋದ್ಯಮ, ಮಾಧ್ಯಮ ವಿಮರ್ಶೆಯಾಗಿರಬೇಕು. ವರದಿ ಮಾಡುವಿಕೆಯಲ್ಲಿ ಸೂಕ್ಷ ತೆಯು ಬಹಳ ಮುಖ್ಯವಾಗಿದ್ದು, ಸುದ್ದಿಯಲ್ಲಿ ಎಂದಿಗೂ ರಾಜಿ ಸಲ್ಲದು. ಪತ್ರಿಕೋದ್ಯಮದಲ್ಲಿ ಅಭ್ಯಾಸ, ಗುಣಮಟ್ಟ. ಮಹಾರಾಷ್ಟ್ರದಲ್ಲಿನ ಕನ್ನಡಿಗ ಮಾಧ್ಯಮಗಳು ಕನ್ನಡಿಗರ ದೃಷ್ಟಿಕೋನದಿಂದ ವರದಿ ಮಾಡುತ್ತಿರುವುದು ಸ್ತುತ್ಯಾರ್ಹ. ಆದ್ದರಿಂದಲೇ ಮುಂಬಯಿವಾಸಿ ಕನ್ನಡಿಗ ಪತ್ರಕರ್ತರು ರಾಷ್ಟ್ರೀಯ ಪತ್ರಕರ್ತರಾಗಿದ್ದೀರಿ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ತಿಳಿಸಿದರು.

ಇಂದಿಲ್ಲಿ ಭಾನುವಾರ ಅಂಧೇರಿ ಪೂರ್ವದ ಸಾಲೀಟರಿ ಕಾರ್ಪೋರೆಟ್ ಪಾರ್ಕ್‌ನ ಕ್ಲಬ್ ಹೌಸ್ ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಆಯೋಜಿಸಿದ್ದ ಸಂಘದ 2025ನೇ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಆಯೇಷಾ ಖಾನಂ ಮಾತನಾಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಮತ್ತು ಪ್ರಶಸ್ತಿ ಸಮಿತಿ ಕಾರ್ಯಾಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ (ಪತ್ರಕರ್ತರ ಸಂಘದ ಹಿರಿಯ ಸಲಹೆಗಾರ್ತಿ), ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಜಿ.ಮುರುಳ್ಯ, ಸೂಕ್ತ ನ್ಯೂಸ್ ವಿಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರವರ್ತಕ ಜೋನ್ ವಿಲ್ಸನ್ ಲೋಬೊ ಪ್ರಧಾನ ಅಭ್ಯಾಗತರಾಗಿದ್ದು ನವ ದೆಹಲಿಯ ಹಿರಿಯ ಪತ್ರಕರ್ತ ಡಿ.ಉಮಪತಿ (ಚಿತ್ರದುರ್ಗ) ಅವರಿಗೆ ಶಾಲು ಹೊದಿಸಿ, ರೂ. 25,000/- ನಗದು, ಪುರಸ್ಕಾರ ಫಲಕ, ಪ್ರಶಸ್ತಿಪತ್ರ, ಫಲಪುಷ್ಫಗಳನ್ನಿತ್ತು 2025ನೇ ವಾರ್ಷಿಕ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಕಲ್ಯಾಣ್ ಪರಿಸರದ ಹೆಸರಾಂತ ಎನ್‌ಜಿಒನ ಸಮಾಜ ಸೇವಾ ಕಾರ್ಯಕರ್ತೆ, ಟ್ರಾನ್ಸ್‌ಜೆಂಡರ್ ಶ್ರೀದೇವಿ ಲೋಂಡೆ ಅವರಿಗೆ ವಿಶೇಷ ಸನ್ಮಾನವನ್ನಿತ್ತು ಗೌರವಿಸಲಾಯಿತು. ಗೌ| ಪ್ರ| ಕಾರ್ಯದರ್ಶಿ ಸಾ.ದಯಾ (ದಯಾನಂದ್) ಪುರಸ್ಕತರನ್ನು, ಗೌರವ ಕೋಶಾಧಿಕಾರಿ ವಿಶ್ವನಾಥ್ ಪೂಜಾರಿ ನಿಡ್ಡೋಡಿ ಸನ್ಮಾನಿತರನ್ನು ಪರಿಚಯಿಸಿದರು.

ಶಾಸಕಿ ಭಾಗೀರಥಿ ಮಾತನಾಡಿ ಪ್ರವೃತ್ತಿಯ ಆಡಂಬರವಿಲ್ಲದ ವೃತ್ತಿಪರರು ಪತ್ರಕರ್ತರು. ಪುಸ್ತಕ-ಪೆನ್ನು ಆಸ್ತಿಯಾಗಿರಿಸಿದ ಪತ್ರಕರ್ತರು ಸಮಸ್ಯೆಗಳಿಗೆ ಪರಿಹಾರವನ್ನೀಡುವ ಶಕ್ತಿವುಳ್ಳವರಾಗಿದ್ದಾರೆ. ಜನನದಿಂದ ಮರಣದ ವರೇಗೆ ಸೇವೆಸಲ್ಲಿಸುವ ವೃತ್ತಿಯಿದ್ದರೆ ಅದು ಪತ್ರಕರ್ತರದ್ದಾಗಿದೆ. ಪತ್ರಕರ್ತರು ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲು ಸ್ಪೂರ್ತಿದಾಯಕರಾಗಿದ್ದು ಜನರ ಒಳ್ಳೆಯ ಕೆಲಸಗಳನ್ನು ಗುರುತಿಸುವ ಕೆಲಸ ಪತ್ರಕರ್ತರು ಮಾಡುತ್ತಿರುವುದು ಪ್ರಶಂಸನೀಯ ಎಂದರು.

ಜನರಿಗೆ ಸತ್ಯವನ್ನು ಮುಟ್ಟಿಸುವ ಕೆಲಸ ಪತ್ರಕರ್ತರ ಧರ್ಮ. ನಾನು ಪ್ರಶಸ್ತಿಯನ್ನು ವಿನಮ್ರತೆ, ಸಂಕೋಚದಿಂದ ಸ್ವೀಕರಿಸಿದೆ. ಜನರ ವಕ್ತಾರರೇ ಪತ್ರಕರ್ತರು ಆಗಿದ್ದು, ಯುವ ಜನರಿಗೆ ಪ್ರಶಸ್ತಿಗಳು ನೀಡಿದಾಗ ಭಾವೀ ಜನಾಂಗಕ್ಕೆ ಸ್ಪೂರ್ತಿ ಪ್ರೇರಣೆಯಾಗುತ್ತದೆ. ಬರೆಯುವ ಕಲೆ ಇಲ್ಲದವರು ಪತ್ರಕರ್ತರಾಗಲು ಅಸಾಧ್ಯ. ಇಂದು ಪ್ರತಿಕಾವೃತ್ತಿ ಉದ್ಯಮವೃತ್ತಿಯಾಗಿ ಕಾರ್ಪೋರೇಟ್ ಮಟ್ಟಕ್ಕೆ ಬೆಳೆದಿದೆ. ಸಾಮಾಜಿಕ ಕಳಕಳಿ ಪತ್ರಕರ್ತರ ಆಗಬೇಕು ಎಂದು ಪ್ರಶಸ್ತಿಗೆ ಉತ್ತರಿಸಿ ಡಿ.ಉಮಪತಿ ತಿಳಿಸಿದರು.

ಶ್ರೀದೇವಿ ಲೋಂಡೆ ಮಾತನಾಡಿ ಸಮಾಜದಲ್ಲಿ ಲಿಂಗ ತಾರತಮ್ಯವು ದೊಡ್ಡ ಸಮಸ್ಯೆಯಾಗಿದೆ. ಜನ್ಮ ನೀಡಿದ ಮಾತಾಪಿತರಿಂದ ಒಡಹುಟ್ಟಿದ ಸಹೋದರರಿಂದಲೂ ನಾವು ಲಜ್ಜೆಗೆಒಳಪಟ್ಟು ಅಂತರ ಕಾಪಾಡಿ ಕೊಳ್ಳುವಂತಾಗಿರುವುದು ದೊಡ್ದ ದುರಂತವೇ ಸರಿ. ನಮ್ಮದು ಮನಸ್ಸು, ಆತ್ಮ, ಲಿಂಗ ಮತ್ತು ದೇಹ ಬೇರೆಬೇರೆಯಾಗಿದ್ದರೂ ಆದರೂ ನಾವೂ ಈ ಪ್ರಕೃತಿ ಸೃಷ್ಠಿಯಲ್ಲಿ ಭಗವಂತ ಮಕ್ಕಳೇ ಅನ್ನುವುದಷ್ಟೇ ನಮಗೆ ಸಂತೋಷ ನೀಡುತ್ತಿದೆ. ನಮಗೂ ಸಮಾಜದಲ್ಲಿ ಸ್ವಂತಿಕೆಯ ಸ್ಥಾನಮಾನವಿದ್ದು ಸಮಾನತೆಯ ಬದುಕುವಿದೆ. ಇದನ್ನು ಪರಿಗಣಿಸಿದ ಈ ಪತ್ರಕರ್ತರ ಸಂಘ ನನ್ನನ್ನು ಗೌರವಿಸಿರುವುದು ಅಭಿಮಾನ ತಂದಿದೆ. ನಿಮ್ಮ ವಿಶಾಲ ಮನೋಭಾವದ ಚಿಂತನೆಯಿಂದ ತೃತಿಯ ಲಿಂಗಿಯರಿಗೂ ಸೂಕ್ತಸ್ಥಾನಮಾನದ ಬಾಳು ಕರುಣಿಸಲಿ ಎಂದರು.

ಮಹಾರಾಷ್ಟ್ರವಾಸಿ ಕನ್ನಡಿಗರು ಹೊಂದಾಣಿಕೆಯಿಂದ ಬಾಳುವವರಾಗಿದ್ದಾರೆ. ಕೆ.ಟಿ ವೇಣುಗೋಪಾಲ್ ಓರ್ವ ಒಳ್ಳೆಯ ಮಾಧ್ಯಮ ಪ್ರತಿನಿಧಿ ಮಾತ್ರವಲ್ಲ, ಒಳ್ಳೆಯ ಬರಹಗಾರರೂ ಆಗಿದ್ದರು. ಇಂತಹ ಪ್ರತಿಷ್ಠಿತ ಪತ್ರಕರ್ತರ ಪ್ರಶಸ್ತಿ ಯಾರ್‍ಯರಿಗೂ ಸಲ್ಲಬಾರದು ಬದಲಾಗಿ ಅರ್ಹವ್ಯಕ್ತಿಗೆನೇ ಸಲ್ಲಬೇಕು. ಕೇವಲ ಸುದ್ಧಿಗಾರರಾಗದೆ ಒಳ್ಳೆಯ ಬರಹಗಾರನಾಗುವುದೇ ಪತ್ರಕರ್ತನ ಲಕ್ಷಣ. ಮುಂಬಯಿಯಂತಹ ಸಂಕೀರ್ಣ ಬದುಕಿನಲ್ಲಿ ಇಂತಹ ಸಂಘಟನೆ ಮುಂದುವರಿಯುವುದು ಕಷ್ಟವಾದರೂ ಅನಿವಾರ್ಯವೂ ಹೌದು. ಒಳ್ಳೆಯ ಓದುಗ, ಲೇಖಕನೇ ಶ್ರೇಷ್ಠವಾದ ಪತ್ರಕರ್ತನಾಗಲು ಸಾಧ್ಯ. ಆದುದರಿಂದ ಹಲವರ ಬಾಳಿಗಾಗಿ ಬಾಳುವುದೇ ಪತ್ರಕರ್ತರ ಕರ್ತವ್ಯವಾಗಬೇಕು ಎಂದ ಡಾ| ಸುನೀತಾ ಶೆಟ್ಟಿ ತಿಳಿಸಿ ಪ್ರಶಸ್ತಿಯ ಬಗ್ಗೆ ಮಾಹಿತಿಯನ್ನಿತ್ತರು.

ಪತ್ರಕರ್ತರು ಪತ್ರಿಕೋದ್ಯಮದ ನಿಷ್ಠೆಗೆ ಬದ್ಧರಾಗಿ ಮುನ್ನಡೆಯುವ ಅಗತ್ಯವಿದೆ. ಈ ವೃತ್ತಿಧರ್ಮ ಖಂಡಿತಾವಾಗಿಯೂ ರಕ್ಷಿಸುವುದು. ನಮ್ಮ ನಡವಳಿಕೆಯು ಯಾವಾಗಲೂ ಜ್ಞಾನಕ್ಕಿಂತ ಹೆಚ್ಚಿನ ಮಹತ್ವವನ್ನು ಹೊಂದಿದ್ದು, ಜ್ಞಾನವು ವಿಫಲಗೊಳ್ಳುವ ಹಲವು ಸಂದರ್ಭಗಳಿವೆ. ಆದರೆ ನಡವಳಿಕೆಯು ಎಲ್ಲವನ್ನೂ ನಿಭಾಯಿಸುತ್ತದೆ. ಆದ್ದರಿಂದ ಪತ್ರಕರ್ತರಲ್ಲಿ ನಡವಳಿಕೆಯೂ ಅತ್ಯಗತ್ಯವಾಗಿದೆ. ಜೀವನ ಪ್ರಯಾಣದಲ್ಲಿ ಯಾವುದೂ ವ್ಯರ್ಥವಾಗುವುದಿಲ್ಲ. ಒಳ್ಳೆಯ ಮತ್ತು ಕೆಟ್ಟ ಅನುಭವಗಳು ನಿಮ್ಮ ಮನಸ್ಸು ಮತ್ತು ಹೃದಯವನ್ನು ಮುಂಬರುವದಕ್ಕೆ ರೂಪಿಸುತ್ತವೆ ಎಂಬುದನ್ನು ಪತ್ರಕರ್ತರು ತಿಳಿದು ಮುನ್ನಡೆಯಬೇಕು ಎಂದು ಅಧ್ಯಕ್ಷ ರೋನ್ಸ್ ಬಂಟ್ವಾಳ್ ತಿಳಿದರು.
ಗೌ| ಪ್ರ| ಕಾರ್ಯದರ್ಶಿ ಸಾ.ದಯಾ (ದಯಾನಂದ್) ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು. ಕನ್ನಡ ಸಂಘ ಸಾಂತಕ್ರೂಜ್ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ, ಸುರೇಶ್ ಎಸ್.ಸಾಲಿಯಾನ್, ತುಳಸೀದಾಸ್ ಅವಿನ್, ಹಾಗೂ ಕೆ.ಟಿ ವೇಣುಗೋಪಾಲ್ ಅಭಿಮಾನಿಗಳನೇಕರು ಉಪಸ್ಥಿತರಿದ್ದು ಪುರಸ್ಕೃತರಿಗೆ ಅಭಿನಂದಿಸಿದರು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ 2025-2028ರ ಸಾಲಿನ ಅಧ್ಯಕ್ಷೆ ಡಾ| ಜಿ.ಪಿ ಕುಸುಮಾ, ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಗೌರವ ಪ್ರಧಾನ ಕಾರ್ಯದರ್ಶಿ ಸವಿತಾ ಸುರೇಶ್ ಶೆಟ್ಟಿ, ಗೌರವ ಕೋಶಾಧಿಕಾರಿ ಸುರೇಶ್ ಕೆ.ಮೂಲ್ಯ, ಜೊತೆ ಕಾರ್ಯದರ್ಶಿ ಶ್ಯಾಮ್ ಎಂ.ಹಂಧೆ, ಜೊತೆ ಕೋಶಾಧಿಕಾರಿ ಡಾ| ದುರ್ಗಪ್ಪ ವೈ.ಕೋಟಿಯವರ್ ಮತ್ತು ಪದಾಧಿಕಾರಿಗಳಿಗೆ ಆಯೇಷಾ ಖಾನಮ್ ಪುಷ್ಪಗುಚ್ಫಗಳನ್ನಿತ್ತು ಅಧಿಕಾರ ವಹಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಂಗ ಎಸ್.ಪೂಜಾರಿ, ಡಾ| ಜಿ.ಪಿ ಕುಸುಮಾ, ಅನಿತಾ ಪಿ.ಪೂಜಾರಿ ತಾಕೋಡೆ, ಕರುಣಾಕರ್ ವಿ.ಶೆಟ್ಟಿ, ಗೋಪಾಲ ಪೂಜಾರಿ ತ್ರಾಸಿ, ಶ್ಯಾಮ ಎಂ.ಹಂಧೆ, ಸಲಹಾ ಸಮಿತಿ ಸದಸ್ಯ ಸುರೇಂದ್ರ ಎ.ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯರಾದ ಡಾ| ಶಿವರಾಮ ಕೆ. ಭಂಡಾರಿ, ನ್ಯಾಯವಾದಿ ಅಮಿತಾ ಎಸ್.ಭಾಗ್ವತ್, ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಸ್ಥಾಪಕ ಉಪಾಧ್ಯಕ್ಷ ಸದಾನಂದ ಡಿ.ನಾಯಕ್, ಸುಧಾಕರ್ ಉಚ್ಚಿಲ್, ಚಂದ್ರವತಿ ದೇವಾಡಿಗ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು.
ವಿದ್ಯಾ ಎಂ.ಭಂಡಾರಿ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ಡಾ| ಶಿವ ಮೂಡಿಗೆರೆ ಪ್ರಸ್ತಾವನೆಗೈದು, ಸ್ವಾಗತಿಸಿ ದರು. ಜತೆ ಕಾರ್ಯದರ್ಶಿಸವಿತಾ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಡಾ| ದುರ್ಗಪ್ಪ ವೈ.ಕೋಟಿಯವರ್, ಜಯರಾಮ ಜಿ.ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಡಾ| ಜಿ.ಪಿ ಕುಸುಮಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನ ಗೊಂಡಿತು.