ಮಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕರಾವಳಿಯ ಜನರ ಮೂಗಿಗೆ ಸತತವಾಗಿ ಬೆಣ್ಣೆ ಸವರಿದಂತೆ ನಡೆದುಕೊಂಡು ಬಜೆಟ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ ಹೊರತು, 17 ಬಜೆಟ್ ಮಂಡಿಸಿ ಸಿಎಂ ದಾಖಲೆ ನಿರ್ಮಿಸಿದ್ದಾರೆ ಎನ್ನುವುದಲ್ಲ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ವ್ಯಂಗ್ಯವಾಡಿದ್ದಾರೆ.

ಸರಕಾರವು ಎಲ್ಲ ಸಂದರ್ಭಗಳಲ್ಲೂ ಕರಾವಳಿ ಜಿಲ್ಲೆಗಳನ್ನು ನಿರ್ಲಕ್ಷಿಸುತ್ತಿದ್ದು, ಈ ಬಜೆಟ್‌ನಲ್ಲೂ ಅದೇ ಧೋರಣೆ ಮುಂದುವರೆದಿದೆ. ಕರಾವಳಿಯ ಪ್ರಮುಖ ಉದ್ಯಮಗಳಾದ ಮೀನುಗಾರಿಕೆ ಮತ್ತು ವಾಣಿಜ್ಯ ಕೃಷಿಗೆ ಬಜೆಟ್‌ನಲ್ಲಿ ಸಮರ್ಪಕ ಅನುದಾನ ನೀಡದಿರುವುದು ಕರಾವಳಿ ಜಿಲ್ಲೆಯ ಮೇಲಿನ ಸರಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ಆಗಿದೆ ಎಂದು ಅವರು ಹೇಳಿದರು.
ಕಳೆದ ಬಜೆಟ್‌ನಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಅದಕ್ಕೆ ಯಾವುದೇ ಅನುದಾನವನ್ನು ನೀಡಲಾಗಿಲ್ಲ. ಇಂದಿನ ಬಜೆಟ್‌ನಲ್ಲಿಯೂ ಪುತ್ತೂರು ಮೆಡಿಕಲ್ ಕಾಲೇಜಿಗೆ ಅನುದಾನ ಮೀಸಲಿಡದೆ ನಿರ್ಲಕ್ಷಿಸಲಾಗಿದೆ. ಅದೇ ಸಂದರ್ಭದಲ್ಲಿ ಪುತ್ತೂರಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವುದಾಗಿ ಘೋಷಣೆ ಮಾಡಲಾಗಿದೆ. ಆದರೆ ಅದಕ್ಕೂ ಅನುದಾನ ನೀಡದಿರುವುದು ಜನರ ನಿರೀಕ್ಷೆಗಳಿಗೆ ಧಕ್ಕೆ ತಂದಿದೆ. ಇದು ಪೊಳ್ಳು ಭರವಸೆಗಳ ಬಜೆಟ್ ಎಂದು ಅವರು ಆರೋಪಿಸಿದರು.
ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕರಾವಳಿಯ ಉದ್ದಗಲಕ್ಕೂ ಭೇಟಿ ನೀಡಿ ಹಲವು ಭಾಷಣಗಳನ್ನು ಮಾಡಿದ್ದರು. ಇದಕ್ಕಾಗಿ ಹೂಡಿಕೆದಾರರು ಹಾಗೂ ಸ್ಥಳೀಯ ಪ್ರತಿನಿಧಿಗಳ ಸಭೆಯನ್ನೂ ಕರೆದಿದ್ದರು. ಮುಂದಿನ ಬಜೆಟ್‌ನಲ್ಲಿ ದೊಡ್ಡ ಮೊತ್ತವನ್ನು ಮೀಸಲಿಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇಂದಿನ ಬಜೆಟ್‌ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನವನ್ನು ನೀಡದಿರುವುದು ಸರಕಾರದ ಬೋಗಸ್ ಘೋಷಣೆಗಳನ್ನು ಬಹಿರಂಗಪಡಿಸುತ್ತದೆ ಎಂದು ಅವರು ಟೀಕಿಸಿದರು.
ಕರಾವಳಿ ಜಿಲ್ಲೆಗಳನ್ನು ಕೇಂದ್ರೀಕರಿಸಿ ಸ್ಥಾಪಿಸಲಾದ ನಿಗಮಗಳು ಹಾಗೂ ಮಂಡಳಿಗಳಿಗೆ ಈ ಬಜೆಟ್‌ನಲ್ಲಿ ಅನುದಾನ ನೀಡಲಾಗಿಲ್ಲ. ಹಿಂದಿನ ಬಜೆಟ್‌ನಲ್ಲಿ ಮಾಡಿದ್ದ ಕೆಲವು ಘೋಷಣೆಗಳನ್ನೇ ಮತ್ತೆ ಪುನರಾವರ್ತನೆ ಮಾಡಿರುವುದು “ಹಳೆ ಮದ್ಯ ಹೊಸ ಬಾಟಲಿ” ಎಂಬಂತಾಗಿದೆ ಎಂದು ಅವರು ಟೀಕಿಸಿದರು.
ಕೆಲವು ತಿಂಗಳುಗಳ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಮೇಲ್ದರ್ಜೆಗೇರಿಸಿ ಕರಾವಳಿ ಅಭಿವೃದ್ಧಿ ಮಂಡಳಿಯನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ ಹೆಸರಿಗಷ್ಟೇ ಕರಾವಳಿ ಅಭಿವೃದ್ಧಿ ಮಂಡಳಿ ಇದ್ದು, ಅದಕ್ಕೆ ಯಾವುದೇ ಅನುದಾನ ನೀಡಲಾಗಿಲ್ಲ. ಇಂದಿನ ಬಜೆಟ್‌ನಲ್ಲಿಯೂ ಮಂಡಳಿಗೆ ನಯಾಪೈಸೆಯೂ ಮೀಸಲಿಡದಿರುವುದು ದುರ್ದೈವಕರವಾಗಿದೆ. ಅತೀ ಹೆಚ್ಚು ಅನಿವಾಸಿಗಳು ಇರುವ ಕರಾವಳಿ ಜಿಲ್ಲೆಗೆ, ಅನಿವಾಸಿ ಕನ್ನಡಿಗರ ಬಹುಕಾಲದ ಬೇಡಿಕೆಯಾದ ಕೇರಳ ಮಾದರಿಯ ವಿಶೇಷ ಪ್ಯಾಕೇಜ್ ಹಾಗೂ ಅನಿವಾಸಿ ಸಚಿವಾಲಯ ಸ್ಥಾಪನೆ ಈ ಬಜೆಟ್‌ನಲ್ಲಿಯೂ ಘೋಷಣೆಯಾಗಿಲ್ಲ. ಜಿಲ್ಲೆಯ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಅನಿವಾಸಿ ಕನ್ನಡಿಗರನ್ನು ಸರಕಾರ ಕಡೆಗಣಿಸಿದೆ ಎಂದು ಅವರು ಹೇಳಿದರು.
ಅದೇ ರೀತಿ, ಸುಮಾರು 25 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಬ್ಯಾರಿ ಜನಾಂಗದ ಅಭಿವೃದ್ಧಿಗಾಗಿ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಬೇಡಿಕೆಯೂ ಈ ಬಜೆಟ್‌ನಲ್ಲಿ ಈಡೇರದೆ ಮತ್ತೆ ಮರೀಚಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಕರಾವಳಿ ಜಿಲ್ಲೆಗಳನ್ನು ನಿರ್ಲಕ್ಷಿಸಿ ತಾರತಮ್ಯ ಮಾಡುವ ಸರಕಾರದ ನಿಲುವು ಮತ್ತೆ ಮುಂದುವರಿಯುತ್ತಿರುವುದು ವಿಷಾದನೀಯ ಎಂದು ಎಸ್‌ಡಿಪಿಐ ಅಭಿಪ್ರಾಯಪಟ್ಟಿದೆ.


