ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲ್ ರವರ ಮೊದಲ ಕಥಾ ಸಂಕಲನ “ಪಾಸ” ಬಿಡುಗಡೆ.
ಬಜಾಲ್ : ಪಕ್ಕಲಡ್ಕ ಸ್ನೇಹ ಪಬ್ಲಿಕ್ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಶಿಕ್ಷಕ ಎಂ ಅಶೀರುದ್ದೀನ್ ಆಲಿಯಾ, ಸಾರ್ತಬೈಲ್ ರವರ ಮೊದಲ ಕಥಾ ಸಂಕಲನ ಪಾಸ ಪುಸ್ತಕ ಬಿಡುಗಡೆ ಮತ್ತು ಬಹುಮಾನ ವಿತರಣಾ ಸಮಾರಂಭ ಮರ್ಹೂಮ್ ಇಬ್ರಾಹಿಂ ಸಯೀದ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಹಿರಿಯ ಸಮಾಜ ಸೇವಕ ಕೆ.ಪಿ ಕರೀಂ ಟೈಲರ್ ಕಥಾ ಸಂಕಲನ “ಪಾಸ” ವನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು “ಅನುಭವದಿಂದ ಕಥೆಯ ಹುಟ್ಟು, ಓದುವುದರಿಂದಲೇ ಜ್ಞಾನಾಭಿವೃದ್ದಿ, ಜೀವನದಲ್ಲಿ ಅನುಭವಗಳನ್ನು ಪಡೆಯುತ್ತಿರಬೇಕು ಹೆಚ್ಚು ಓದಬೇಕು ಮತ್ತು ಹೆಚ್ಚು ಬರೆಯಬೇಕು ಆಗ ನಮ್ಮಲ್ಲಿ ಮಾನವೀಯತೆಯ ಗುಣಗಳು ಉಂಟಾಗುತ್ತದೆ. ಮಾತೃ ಭಾಷೆಯಲ್ಲಿ ಮಾತ್ರ ಕನಸು ಕಾಣಲು ಸಾಧ್ಯ ಕನ್ನಡವನ್ನು ಪ್ರೀತಿಸಬೇಕು ಸಾಹಿತ್ಯವನ್ನು ಬೆಳೆಸಬೇಕು. ಕಥೆಗಾರನಿಗೆ ಅಭಿನಂದನೆಗಳು ಅವರಿಗೆ ಸಾಹಿತ್ಯದಲ್ಲಿ ಅಭಿರುಚಿ ಇದ್ದು ಇನ್ನೂ ಹೆಚ್ಚು ಪುಸ್ತಕವನ್ನು ಬರೆದು ಸಮಾಜದ ಮುನ್ನಲೆಗೆ ಬರಲಿ” ಎಂದು ಹಾರೈಸಿದರು.

ಉದ್ಯಮಿ ಅಬ್ದುಲ್ ಮುತ್ತಲಿಬ್ ಮಾತನಾಡಿ “ಎಂ ಆಶೀರುದ್ದೀನ್ ಅವರು ಉತ್ತಮವಾಗಿ ಬರೆದು ಈ ಪುಸ್ತವನ್ನು ಕನ್ನಡ ನಾಡಿಗೆ ಅರ್ಪಿಸಿದ್ದಾರೆ, ಪುಸ್ತಕ ಬರೆಯುವುದು ಸುಲಭದ ಮಾತಲ್ಲ, ಪ್ರಕಟಿಸುವುದೂ ಕೂಡಾ ಕಷ್ಟಕರ, ಇಂದಿನ ಕಾಲದಲ್ಲಿ ಅದೊಂದು ಸವಲು. ಈ ಪುಸ್ತಕದ ಬಿಡುಗಡೆಗಾಗಿ ತುಂಬಾ ಸಮಯದಿಂದ ಕಾದಿದ್ದರು, ಇನ್ನೂ ಹೆಚ್ಚು ಹೆಚ್ಚು ಪುಸ್ತಕ ಬರೆದು ಸಾಹಿತ್ಯ ಲೋಕದಲ್ಲಿ ಹೆಸರುಗಳಿಸಲಿ” ಎಂದು ಹೇಳಿದರು.

“ಪಾಸ” ಎಂದರೆ ತುಳುವಿನಲ್ಲಿ ಉಪವಾಸ ಎಂದರ್ಥ, ಕರಾವಳಿಯ ಬ್ಯಾರಿಗಳಿಗೆ ಉಪವಾಸದ ತಿಂಗಳು ಒಂದು ಸಂಭ್ರಮದ ತಿಂಗಳು ಹಿಂದಿನ ಕಾಲದಲ್ಲಿ ಬಡತನ ಇದ್ದರೂ ಹೇಗೆ ಹಸಿವನ್ನು ನಿಭಾಯಿಸಿ ಬದುಕ್ಕುತ್ತಿದ್ದರು. ಉಪವಾಸ, ಹಬ್ಬ ಇತರ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಹಿಂದೂ ಮುಸಲ್ಮಾನರು ಹೇಗೆ ಅನ್ಯೋನ್ಯತೆಯಿಂದ ಬದುಕುತ್ತಿದ್ದರು ಹಾಗೂ ಅವರ ನಿತ್ಯ ಜೀವನದಲ್ಲಿ ಸರ್ವೇ ಸಾಮಾನ್ಯವಾಗಿದ್ದ ಪ್ರೀತಿ, ದ್ವೇಷ ಮತ್ತು ಸಾಮರಸ್ಯದ ಬಗ್ಗೆ ಒಟ್ಟು 16 ಕಥೆಗಳನ್ನು ಈ ಪುಸ್ತಕದಲ್ಲಿ ಒಳಗೊಂಡಿದೆ. ನಿಮ್ಮೆಲ್ಲರ ಬಾಲ್ಯ ಕಾಲದ ಬದುಕಿನ ಕಥೆಯೂ ಓದುವಾಗ ಅನುಭವಕ್ಕೆ ಬರಬಹುದು ಎಲ್ಲರೂ ಓದುವುದೇ ಕಥೆಗಾರನಿಗೆ ಸಂದುವ ಗೌರವ ಎಂದು ಲೇಖಕ ಪುಸ್ತಕದ ಸಂಕ್ಷಿಪ್ತ ಪರಿಚಯ ಮಾಡಿದರು. ಶಿಕ್ಷಕಿ ಶ್ರೀಮತಿ ನಾಗರತ್ನ ಕನ್ನಡ ಭಾಷೆಯ ಮಹತ್ವದ ಬಗ್ಗೆ ದಿಕ್ಸೂಚಿ ಮಾತುಗಳನ್ನಾಡಿದರು.

“ಲೇಖಕರಿಗೆ ತನ್ನ ಪುಸ್ತಕವನ್ನು ದೊಡ್ಡ ಕಾರ್ಯಕ್ರಮ ನಡೆಸಿ ಸಭಾಂಗಣದಲ್ಲಿ ಬಿಡುಗಡೆ ಮಾಡಬಹುದಿತ್ತು, ಮಕ್ಕಳಿಗೆ ಸ್ಪೂರ್ತಿಯಾಗಲಿ ಎಂದು ತನ್ನ ವಿದ್ಯಾರ್ಥಿಗಳ ಮುಂದೆಯೇ ಬಿಡುಗಡೆ ಮಾಡುವ ತೀರ್ಮಾನಕ್ಕೆ ನಾನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಚೆನ್ನಾಗಿ ಕಲಿತು ಸಾಹಿತ್ಯವನ್ನು ಬೆಳೆಸುವ ಬರಹಗಾರರಾಗಿ ಬದಲಾಗಬೇಕೆಂದು ಆಶಿಸುತ್ತೇನೆ ಎಂದು ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಗಫೂರ್ ಕುಲಾಯಿ ಹಿತವಚನ ನೀಡಿದರು.
ಸ್ನೇಹ ಪಬ್ಲಿಕ್ ಸ್ಕೂಲ್ ಸಂಚಾಲಕ ಯೂಸುಫ್ ಪಕ್ಕಲಡ್ಕ, ಮುಖ್ಯೋಪದ್ಯಾಯಿನಿ ಖುರೇಶಾ ನುಸ್ರತ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಪಿ.ಬಿ, ಉಪಾಧ್ಯಕ್ಷ ಸಲೀಂ ಮಲಾರ್, ಕಾರ್ಯದರ್ಶಿ ಮೊಹಮ್ಮದ್ ಫರ್ವೀಝ್ ಶುಭಹಾರೈಕೆಗಳನ್ನಾಡಿದರು.

ಶ್ರೀಮತಿ ಮರಿಯಮ್ ನೌರೀನ್, ಮೊಯಿದಿನ್ ಪಕ್ಕಲಡ್ಕ ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕನ್ನಡ ರಾಜ್ಯೋತ್ಸವದ ಸಂಭ್ರಮದ ಪ್ರಯುಕ್ತ ಕನ್ನಡ ಭಾಷಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಬಹುಮಾನ ವಿತರಣೆ ನಡೆಯಿತು.
ಹಿರಿಯ ಕನ್ನಡ ಓದುಗ ತೊಂಬತ್ತರ ಹರೆಯದ ಕೆ.ಪಿ ಕರೀಮ್ ಟೈಲರ್ ರವರಿಗೆ ಗೌರವ ಸನ್ಮಾನ ಪ್ರಧಾನ ಮಾಡಲಾಯಿತು. ವಿದ್ಯಾರ್ಥಿ ಶಾಹಿದ್ ಕಿರಾಅತ್ ಪಠಿಸಿದರು, ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು, ಸಹ ಶಿಕ್ಷಕಿ ಶ್ರೀಮತಿ ರಮ್ಯಾ ಕಾರ್ಯಕ್ರಮ ನಿರೂಪಿಸಿದರು, ಸಾಹಿತಿ ಶಿಕ್ಷಕ ಆಶೀರುದ್ದೀನ್ ಆಲಿಯಾ, ಸಾರ್ತಬೈಲ್ ಸ್ವಾಗತಿಸಿದರು, ಸಹ ಮುಖ್ಯೋಪದ್ಯಾಯಿನಿ ಶ್ರೀಮತಿ ಪಾವನಾ ವಂದಿಸಿದರು.


