ಉಳ್ಳಾಲ:ಆ-10: ಮಕ್ಕಳು ಕಂಸ,ರಾವಣರಾಗದೆ ಶ್ರೀರಾಮ,ಶ್ರೀಕೃಷ್ಣರಾಗಿ ಸಮಾಜಕ್ಕೆ ಆದರ್ಶಪ್ರಾಯರಾಗಬೇಕೆಂಬ ಸದುದ್ದೇಶದಿಂದ ತೊಕ್ಕೊಟ್ಟಿನಲ್ಲಿ ಕಳೆದ 27 ವರುಷಗಳಿಂದ ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನ ನಡೆಸಿ ಜನರಲ್ಲಿ ಕೃಷ್ಣ ಪ್ರಜ್ನೆ ಮೂಡಿಸುತ್ತಿರುವ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ನ ಕಾರ್ಯ ಶ್ಲಾಘನೀಯವೆಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಆರತಿ ರಾಮಚಂದ್ರ ಆಳ್ವ ಅವರು ಅಭಿಪ್ರಾಯಪಟ್ಟರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತೊಕ್ಕೊಟ್ಟಿನ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ತೊಕ್ಕೊಟ್ಟು ಒಳಪೇಟೆಯ ಅಂಬೇಡ್ಕರ್ ಮೈದಾನದಲ್ಲಿ ಭಾನುವಾರದಂದು ನಡೆದ “ಮುದ್ದುಕೃಷ್ಣ -2025” ಕೃಷ್ಣ ವೇಷ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ಕೃಷ್ಣನೊಂದಿಗೆ ತಾಯಿ ಯಶೋಧೆಯರನ್ನ ನೋಡುವುದೆ ಬಹಳ ಸೊಗಸು.ತನ್ನ ಮಕ್ಕಳಲ್ಲಿ ಶ್ರೀಕೃಷ್ಣನನ್ನ ಕಾಣುವ ಹಂಬಲದಿಂದ ತಾಯಂದಿರು ಮಾಡುವ ಪೂರ್ವ ತಯಾರಿಯನ್ನ ಮೆಚ್ಚಬೇಕಿದೆ.ವೇದಿಕೆಯಲ್ಲಿ ಮಕ್ಕಳು ಕೃಷ್ಣ ವೇಷವನ್ನು ತೊಟ್ಟು ಪ್ರದರ್ಶನ ನೀಡುತ್ತಿರುವಾಗ ತಾಯಂದಿರು ವೇದಿಕೆಯ ಮೂಲೆಯಲ್ಲಿ ನಿಂತು ಸಂಭ್ರಮಿಸಲು ಅವಕಾಶ ಕಲ್ಪಿಸಿ ಕೊಟ್ಟ ಮುದ್ದು ಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ನ ಕಾರ್ಯ ಎಲ್ಲರೂ ಮೆಚ್ಚುವಂತದ್ದಾಗಿದೆ ಎಂದರು.
ಮಾಜಿ ಕೇಂದ್ರ ಸಚಿವರು,ಹಿರಿಯ ಕಾಂಗ್ರೆಸಿಗರಾದ ಬಿ.ಜನಾರ್ಧನ ಪೂಜಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುರೇಶ್ ಭಟ್ನಗರ,ಯೇನೆಪೊಯ ವಿವಿ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.ಅಶ್ವಿನಿ ಶೆಟ್ಟಿ,ಚೀರುಂಭ ಭಗವತೀ ಕ್ಷೇತ್ರದ ಕಂಡಪ್ಪ ಕಾರ್ನವರ್,ಉದ್ಯಮಿ ಮಣಿ ಉಳ್ಳಾಲ್,ಪತ್ರಕರ್ತರಾದ ದಿನೇಶ್ ನಾಯಕ್,ಅನ್ಸಾರ್ ಇನೋಳಿ,ನೃತ್ಯಪಟು ಜೆನಿತಾ,ಕಲಾವಿದ ಗಿರೀಶ್ ಕುಲಾಲ್,ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಕಾಂತ್ ಕ್ಲಿಕ್ ತೊಕ್ಕೊಟ್ಟು,ಉಪಾಧ್ಯಕ್ಷರಾದ
ಸತೀಶ್ ದೀಪಂ, ಪ್ರಧಾನ ಕಾರ್ಯದರ್ಶಿ ಭವಿತ್ ಬಂಗೇರ, ಕಾರ್ಯಕ್ರಮ ಸಂಯೋಜಕ ಅಶೋಕ್ ಕ್ಲಿಕ್ ಮೊದಲಾದವರು ಉಪಸ್ಥಿತರಿದ್ದರು.
ಬಬಿತಾ ಲತೀಶ್ ಕಾರ್ಯಕ್ರಮ ನಿರೂಪಿಸಿದರು.