ಉಳ್ಳಾಲ: ಸ್ಪೀಕರ್ ಖಾದರ್ ಅವರು ಶಾಸಕರ ಭವನಗಳ ಅಭಿವೃದ್ಧಿ ಹೆಸರಿನಲ್ಲಿ ನಡೆಸಿರುವ ಭ್ರಷ್ಟಾಚಾರ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಹಾಗೂ ಸಾಂವಿಧಾನಿಕ ಗೌರವಾನ್ವಿತ ಪೀಠಕ್ಕೆ ಅಗೌರವ ತಂದಿದೆ. ಈವರೆಗೂ ಆಗದಂತಹ ಭ್ರಷ್ಟಾಚಾರವನ್ನು ಕ್ಷೇತ್ರದ ಶಾಸಕರು ನಡೆಸಿರುವುದು ಕ್ಷೇತ್ರಕ್ಕೆ ಕಪ್ಪುಚುಕ್ಕೆಯಾಗಿದೆ. ಪ್ರಕರಣದ ನ್ಯಾಯಾಂಗ ತನಿಖೆ ನಡೆಯುವವರೆಗೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕರ‍್ಯದರ್ಶಿ ಮೋಹನ್ ರಾಜ್ ಕೆ.ಆರ್ ಹೇಳಿದ್ದಾರೆ.

ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 4ಜಿ ವಿನಾಯಿತಿಯಲ್ಲಿ ಶಾಸಕರ ಭವನಗಳ ಅಭಿವೃದ್ಧಿ ಕೆಲಸಗಳು ತರಾತುರಿಯಲ್ಲಿ ಯಾಕೆ ನಡೆಸಲಾಯಿತು. ಆರ್ಥಿಕ ಇಲಾಖೆ ಕಾಮಗಾರಿಯನ್ನು ತಿರಸ್ಕಾರ ಮಾಡಿದರೂ, ಮುಖ್ಯಮಂತ್ರಿಗಳೇ ಕಾಮಗಾರಿಗೆ ಒಪ್ಪಿಗೆ ನೀಡಿರುವುದು ಗಂಭೀರ ವಿಚಾರ. ಪ್ರಕೃತಿ ವಿಕೋಪಗಳ ಸಂದರ್ಭ, ತುರ್ತು ಪರಿಸ್ಥಿತಿಯಲ್ಲಿ 4ಜಿ ವಿನಾಯಿತಿ ನಡೆಸಿ ಕಾಮಗಾರಿ ನಡೆಸಲಾಗುತ್ತದೆ. ಆದರೆ ಎಲ್ಲಾ ವ್ಯವಸ್ಥೆಗಳಿರುವ ಶಾಸಕರ ಭವನಗಳ ಅಭಿವೃದ್ಧಿಗೆ 4ಜಿ ವಿನಾಯಿತಿ ಯಾವ ಆಧಾರದಲ್ಲಿ ಪಡೆದುಕೊಂಡಿರಿ?. ಟೆಂಡರ್ ಕರೆಯುವುದು ಸೇರಿದಂತೆ ಕಾಮಗಾರಿ ನಿರ್ವಹಿಸುವಾಗ ಅದಕ್ಕಾದ ನಿಯಮಗಳಿತ್ತು ಅವೆಲ್ಲವನ್ನು ಗಾಳಿಗೆ ತೂರಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ. ಸರಕಾರದ ಪ್ರಧಾನ ಕರ‍್ಯದರ್ಶಿಗಳು ಇಂತಹ ಕಾಮಗಾರಿಗೆ ಒಪ್ಪಿಗೆ ಸೂಚಿಸಿರುವುದು ಯಾವ ಆಧಾರದ ಮೇಲೆ ಎಂಬುದು ಗೊತ್ತಾಗುತ್ತಿಲ್ಲ.
ಪಂಪ್‌ವೆಲ್‌ನ ಸಂಸ್ಥೆ ಹಾಸ್ಯಾಸ್ಪದ ವಿಚಾರವೆಂದರೆ ತಂತ್ರಜ್ಞಾನದ ವಸ್ತುಗಳು, ಇಡೀ ದೇಶಕ್ಕೆ ಸರಬರಾಜಾಗುವ ಆಧುನಿಕ ಸಲಕರಣೆಗಳು ಬೆಂಗಳೂರಿನಲ್ಲಿರುವಾಗ ಬೆಂಗಳೂರಿನಲ್ಲಿರುವ ಶಾಸಕರ ಭವನಕ್ಕೆ ಮಂಗಳೂರಿನ ಪಂಪ್ ವೆಲ್ ನ ಸಂಸ್ಥೆಯಿಂದ ಸೊತ್ತುಗಳನ್ನು ಸರಬರಾಜು ಮಾಡಿರುವುದು, ಪಂಪ್ ವೆಲ್‌ನ ಓನಿಕ್ಸ್ ಗೋಲ್ಡ್ ಪ್ಯಾಲೇಸ್ ನಲ್ಲಿರುವ ಆಸ್ಕಿನ್ ಆಟೊಮೇಷನ್ ಪ್ರೆ. ಲಿ ಸಂಸ್ಥೆಯಿಂದ ಆನ್ಲೈನ್ನ್ ನಲ್ಲಿ ಕನಿಷ್ಠ ರೂ.16,000 ಕ್ಕೆ ದೊರೆಯುವ ಸ್ಮಾರ್ಟ್ ಡೂರ್ ಲಾಕ್ ರೂ.49,000, ಸ್ಮಾರ್ಟ್ ಸೇಫ್ ಲಾರ‍್ಸ್ ರೂ.9,000ಕ್ಕೆ ಸಿಗುವುದನ್ನು ರೂ.35,000 ಹಾಗೂ ಸ್ಮಾರ್ಟ್ ಎನರ್ಜಿ ಮಾನಿಟರಿಂಗ್ ಸೊಲ್ಯುಷನ್ಸ್ ರೂ.90,500 ಒಟ್ಟು ರೂ.2,99,47,500 ಬೆಲೆಯ ಸೊತ್ತುಗಳ ಸರಬರಾಜು ಮಾಡಲಾಗಿದೆ. ಮೂರು ಪಟ್ಟು ಜಾಸ್ತಿ ಅಂದರೆ ಕೋಟ್ಯಂತರ ಭ್ರಷ್ಟಾಚಾರ ಎಸಗಲಾಗಿದೆ. ಅದರಂತೆ ವಿಧಾನಸೌಧದಲ್ಲಿ ಮೂರು ದಿನಗಳ ಪುಸ್ತಕ ಮೇಳಕ್ಕೆ ದಿನವೊಂದಕ್ಕೆ ರೂ. 1 ಕೋಟಿ ವ್ಯಯ ಮಾಡಲಾಗಿದೆ. ಜನರ ತೆರಿಗೆ ಹಣವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಕೆ ರಾಜ್ಯದ ಜನತೆಯ ಶಾಪ ಸರಕಾರಕ್ಕೆ ತಟ್ಟಲಿದೆ. ಆರೋಪ ಮಾಡಿರುವವರನ್ನು ಹಾಸ್ಯ ಮಾಡುವ ಬದಲು ತನಿಖೆ ಎದುರಿಸಿರಿ, ಇತ್ತೀಚೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಮತಿಭ್ರಮಣೆ ಪದ ಉಪಯೋಗಿಸಿದ್ದರು. ರಮೇಶ್ ಅವರೇ ನಿಮ್ಮೂರಿನ ರಸ್ತೆಯನ್ನು ಗಮನಿಸಿ, ಇದೀಗ ವಿಧಾನಸೌಧದೊಳಗಿನ ಭ್ರಷ್ಟಾಚಾರವನ್ನು ಪರಾಮರ್ಶಿಸಿ ಮತಿಭ್ರಮಣೆ ನಿಮಗೆ ಆಗಿರುವುದು ಕಾಣುತ್ತಿದೆ. ಗುತ್ತಿಗೆದಾರರು ಕೆಲಸ ನಿರ್ವಹಿಸದೇ ಮೂರನೇ ವ್ಯಕ್ತಿಗಳು ನಡೆಸುವ ಖಾಮಗಾರಿಗಳಿಂದಾಗಿ ಆಧ್ವಾನಗಳು ನಿರ್ಮಾಣವಾಗುತ್ತಿದೆ. ಸ್ಪೀಕರ್ ಯು.ಟಿ.ಖಾದರ್ ಅವರ ಎರಡನೇ ಮುಖ ಕಳಚಿಬಿದ್ದಿದೆ ಸಮಗ್ರ ತನಿಖೆಯಾಗಲಿ, ಗೌರವಾನ್ವಿತ ಸ್ಥಾನದಲ್ಲಿ ಮುಂದುವರಿಯಲು ವಿಫಲರಾಗಿದ್ದಾರೆ. ದೊಡ್ಡ ಕಳಂಕ ಇತಿಹಾಸದಲ್ಲೇ ಪ್ರಥಮವಾಗಿದೆ. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ವಿರುದ್ಧ ಅಂದು ಭ್ರಷ್ಟಾಚಾರದ ಆರೋಪ ಕೇಳಿಬಂದಾಗ ಖುದ್ದಾಗಿ ತಾವೇ ಲೋಕಾಯುಕ್ತಕ್ಕೆ ತೆರಳಿ ದೂರನ್ನು ನೀಡಿ ತನಿಖೆ ನಡೆಸುವಂತೆ ಕೋರಿದ್ದರು. ಅದೇ ಮಾದರಿಯಲ್ಲಿ ತಪ್ಪು ಮಾಡದೇ ಇದ್ದಲ್ಲಿ ಲೋಕಾಯುಕ್ತಕ್ಕೆ ಯು.ಟಿ.ಖಾದರ್ ಅವರು ದೂರು ನೀಡಲಿ ಎಂದು ಒತ್ತಾಯಿಸಿದರು.
ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಮಾತನಾಡಿ, ಟೆಂಡರ್ ಕರೆಯದೇ ವಿಧಾನಸಭೆಯ ಕಾಮಗಾರಿ, ಉಳ್ಳಾಲ ಕ್ಷೇತ್ರದುದ್ದಕ್ಕೂ ಕಳಪೆ ಕಾಮಗಾರಿ ನಿರ್ವಹಣೆ , ಟೆಂಡರ್ ಪಡೆಯುವ ಗುತ್ತಿಗೆದಾರರೆಲ್ಲರೂ ಹಿಂಬಾಲಕರು, ಅರ‍್ಯಾರೂ ಕಾಮಗಾರಿ ನಿರ್ವಹಿಸದೇ ಬೇರೆಯವರಿಗೆ ಕಾಮಗಾರಿ ನಿರ್ವಹಿಸುವ ಮುಖೇನ ಕಳಪೆ ಕಾಮಗಾರಿಯನ್ನು ನಡೆಸಲಾಗಿದೆ. ಸ್ಪೀಕರ್ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪದ ತನಿಖೆಯಾಗಬೇಕಿದೆ, ಅಲ್ಲಿಯವರೆಗೂ ರಾಜೀನಾಮೆ ನೀಡಬೇಕು. ವಿಧಾನಸಭಾ ಕಟ್ಟಡದಲ್ಲಿ ಬೆಂಬಲಿಗರಿಗೆ ಗುತ್ತಿಗೆಯನ್ನು ನೀಡಿರುವುದು ಭ್ರಷ್ಟಾಚಾರವನ್ನು ಸಾಬೀತು ಮಾಡುತ್ತದೆ. ಉಳ್ಳಾಲ ಕ್ಷೇತ್ರದಲ್ಲಿಯೂ ಟೆಂಡರ್ ನಲ್ಲಿ ಗುತ್ತಿಗೆ ಪಡೆಯುವ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸದೇ ಹಿಂಬಾಲಕರಿಗೆ ಕಾಮಗಾರಿಗಳನ್ನು ನೀಡುವ ಮುಖೇನ ಕ್ಷೇತ್ರದುದ್ದಕ್ಕೂ ಕಳಪೆ ಕಾಮಗಾರಿಗಳೇ ನಡೆಯುತ್ತಿದೆ. ಕುಡಿಯುವ ನೀರು ಕಾಮಗಾರಿ ನಿರ್ವಹಣೆಯಲ್ಲಿ ರಸ್ತೆಗಳೆಲ್ಲವನ್ನೂ ಕೆಡವಿ ಹೊಂಡಮಯ ರಸ್ತೆಗಳಿಂದ ಕ್ಷೇತ್ರ ಕೂಡಿದೆ. ಸ್ಪೀಕರ್ ತಮ್ಮ ಅವ್ಯವಹಾರಗಳ ಕುರಿತು ಸಮರ್ಥನೆ ನೀಡದೆ ತನಿಖೆಗೆ ಸಹಕರಿಸಬೇಕು. ಅಲ್ಲಿಯವರೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಮಂಗಳೂರು ಮಂಡಲದ ಪ್ರ.ಕಾ ದಯಾನಂದ ತೊಕ್ಕೊಟ್ಟು, ಉಪಾಧ್ಯಕ್ಷರಾದ ಸುರೇಶ್ ಆಳ್ವ, ಹುಕ್ರಪ್ಪ ನಾಯ್ಕ್ ಉಪಸ್ಥಿತರಿದ್ದರು.


