
ಬಿ.ಸಿ.ರೋಡ್ (ಸೆಪ್ಟೆಂಬರ್ 15, 2025): ವಿಮೆನ್ ಇಂಡಿಯಾ ಮೂವ್ಮೆಂಟ್ – ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ “ವಿಶ್ವ ಪ್ರಜಾಪ್ರಭುತ್ವ ದಿನ”ದ ಅಂಗವಾಗಿ ಇಂದು ಬಿ.ಸಿ.ರೋಡ್ ಕೈಕಂಬದಲ್ಲಿರುವ ಪಕ್ಷದ ಕಛೇರಿಯಲ್ಲಿ ಭವ್ಯವಾದ ಸೆಮಿನಾರ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಮೆನ್ ಇಂಡಿಯಾ ಮೂವ್ಮೆಂಟ್ – ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷೆ ಫಾತಿಮಾ ನುಸೈಬಾ ಪ್ರಾಸ್ತಾವಿಕ ಮಾತುಗಳನ್ನಾಡಿ ಇತಿಹಾಸದಲ್ಲಿ ರಾಜಪ್ರಭುತ್ವದ ಅಸಮರ್ಪಕ ನಿರ್ವಹಣೆ ಅಥವಾ ಸರ್ವಾಧಿಕಾರಿ ಧೋರಣೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೇಗೆ ನಾಂದಿ ಹಾಡಿತು ಎಂಬುದನ್ನು ಸ್ಮರಿಸಿದರು.

ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಹಿದಾ ತಸ್ನೀಂ, ಪ್ರಸ್ತುತ ದಿನಗಳಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಸಂಪೂರ್ಣ ಕುಸಿದು ಹೋಗುತ್ತಿದ್ದು, ಅದನ್ನು ಸಂರಕ್ಷಿಸುವ,ಬೆಳೆಸುವ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಸೆಮೀರಾ ಕೆ.ಎ. ಮಾತನಾಡಿ ರಾಜಕೀಯದಲ್ಲಿ ಮಹಿಳೆಯರು ತಮ್ಮ ಪ್ರಾತಿನಿಧ್ಯದ ಅಗತ್ಯತೆಯನ್ನು ಮನಗಾಣಬೇಕು . ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಬಲೀಕರಣದ ಹಾದಿಯಲ್ಲಿ ಯಶಸ್ವೀ ಹೆಜ್ಜೆಗಳನ್ನಿರಿಸಲು ಶ್ರಮಿಸಬೇಕೆಂದು ಅಭಿಪ್ರಾಯಪಟ್ಟರು.

ಮತ್ತೋರ್ವ ಅತಿಥಿ ಅಡ್ವೋಕೇಟ್ ಶಫಿಯ ಮಾತನಾಡಿ ಮಹಿಳೆಯರು ಕಾನೂನು ಅರಿವನ್ನು ಪಡೆದುಕೊಂಡು, ಸ್ವ_ ಸಬಲೀಕರಣಕ್ಕೆ ಆದ್ಯತೆ ನೀಡಬೇಕೆಂದು ಪ್ರೋತ್ಸಾಹಿಸಿದರು. ವಿಮ್ ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷೆ ಶಿನೀರ ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ನ ನೂತನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಶಾಹಿದ ತಸ್ನೀಂ ಅವರನ್ನು ಹೂ ಗುಚ್ಛ ನೀಡಿ ಅಭಿನಂದಿಸಲಾಯಿತು ಹಾಗೂ ಮುಖ್ಯ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್‌ನ ವಿವಿಧ ಘಟಕಗಳ ಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಪ್ರಜಾಪ್ರಭುತ್ವ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು .ವಿಮ್ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ರುಫೈದ ಸ್ವಾಗತಿಸಿ, ಸಮಿತಿ ಸದಸ್ಯೆ ಮುರ್ಶಿದ ಆಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.



