▪️ಬಿಜೆಪಿ ತಂದ ಗೋಹತ್ಯೆ ನಿಷೇಧ ಕಾನೂನನ್ನು ಕಾಂಗ್ರೆಸ್ ಸರಕಾರ ಮುಸ್ಲಿಮರನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ಜಾರಿ ಮಾಡುತ್ತಿದೆ: ಅನ್ವರ್ ಸಾದತ್
ಪುತ್ತೂರು: ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಳದ ಬೆಳ್ಳಿಚ್ಚಡವು ಎಂಬಲ್ಲಿ ಗೋಸಾಗಾಟಗಾರನ ಮೇಲೆ ನಡೆದ ಶೂಟೌಟ್ ಪ್ರಕರಣದ ಅಸಲಿಯತ್ತಿನ ಬಗ್ಗೆ ಸತ್ಯಾಸತ್ಯತೆ ಬಹಿರಂಗವಾಗಲು ಸದ್ರಿ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಒತ್ತಾಯಿಸಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗೋಸಾಗಾಟಗಾರ ಅಬ್ದುಲ್ಲಾ ಹಾಗೂ ಅವರ ಸಹವರ್ತಿ ಹಾಸನದಿಂದ ಹಣ ಕೊಟ್ಟು ಕೇರಳಕ್ಕೆ 12 ಗೋವುಗಳನ್ನು ಈಚರ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಗಸ್ತಿನಲ್ಲಿದ್ದ ಪೋಲೀಸರು ವಾಹನ ನಿಲ್ಲಿಸಲು ಸೂಚಿಸಿದಾಗ ಅದನ್ನು ನಿರ್ಲಕ್ಷಿಸಿ ವೇಗವಾಗಿ ವಾಹನ ಚಲಾಯಿಸಿ ಈಶ್ವರಮಂಗಳದ ಬೆಳ್ಳಿಚ್ಚಡವು ಎಂಬಲ್ಲಿ ವಾಹನ ಸ್ಟಾರ್ಟ್ ಬಂದ್ ಆಗಿ ವಾಹನ ನಿಲ್ಲುತ್ತದೆ. ಆ ಸಂದರ್ಭದಲ್ಲಿ ವಾಹನದಲ್ಲಿ ಇನ್ನೊಬ್ಬ ಪರಾರಿಯಾದರೆ ಚಾಲಕ ಅಬ್ದುಲ್ಲಾ ವಾಹನದಿಂದ ಇಳಿದ ಕೂಡಲೇ ಪೋಲೀಸರು ಕಾಲಿಗೆ ಶೂಟ್ ಮಾಡಿ ಬಂಧಿಸುತ್ತಾರೆ ಹೊರತು ಪೋಲೀಸರ ಮೇಲೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದ ಎಂಬುದು ಪೋಲೀಸರೆ ಕಟ್ಟಿದ ಕಟ್ಟು ಕಥೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಒಂದು ವೇಳೆ ಪೋಲೀಸ್ ವಾಹನಕ್ಕೆ ಈಚರ್ ವಾಹನದಲ್ಲಿ ಡಿಕ್ಕಿ ಹೊಡೆದಿದ್ದರೆ ಡಿಕ್ಕಿ ಹೊಡೆದ ಪೋಲೀಸ್ ವಾಹನದ ಭಾಗವೂ ಬಹಳಷ್ಟು ಹಾನಿಯಾಗುತ್ತಿತ್ತು. ಆದರೆ ಇಲ್ಲಿ ಕೇವಲ ಹಿಂಭಾಗದ ಬ್ರೇಕ್ ಲೈಟ್ ಮಾತ್ರ ಒಡೆದಂತಿದೆ. ಅದೂ ಕೂಡ ಕಳಚಿಟ್ಟ ಹಾಗೆ ಚಿತ್ರದಲ್ಲಿ ಕಾಣುತ್ತಿದೆ ಎಂದಿದ್ದಾರೆ.
ಅಬ್ದುಲ್ಲಾ ಸೂಕ್ತ ಪರವಾನಗಿ ಇಲ್ಲದೆ ಜಾನುವಾರು ಸಾಗಾಟ ಮಾಡಿದ್ದರೆ ಆತ ಆರೋಪಿಯೇ ಹೊರತು ದರೋಡೆ ಕೋರನೊ ಕೊಲೆಗಡುಕನೋ ಅಥವಾ ಭಯೋತ್ಪಾದಕನೋ ಅಲ್ಲ. ಹಾಗಿರುವಾಗ ಆತನನ್ನು ಬಂಧಿಸಲು ಗುಂಡು ಹೊಡೆಯುವ ಅವಶ್ಯಕತೆ ಏನಿತ್ತು? ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರ ತಂದ ಗೋಹತ್ಯೆ ನಿಷೇಧ ಕಾನೂನನ್ನು ಅಂದು ವಿರೋಧಿಸಿದ್ದ ಕಾಂಗ್ರೆಸ್ ಸರ್ಕಾರ ಇಂದು ಬಿಜೆಪಿಗಿಂತ ಬಹಳಷ್ಟು ಅಚ್ಚುಕಟ್ಟಾಗಿ ಅದರಲ್ಲೂ ಮುಸ್ಲಿಮರನ್ನು ಗುರಿಯಾಗಿಸಿ ಕಾನೂನನ್ನು ಜಾರಿ ಮಾಡುತ್ತಿದೆ. ಗೋ ವ್ಯಾಪರದಲ್ಲಿ ಮುಸ್ಲಿಮರು ಮಾತ್ರವಲ್ಲದೆ ಮುಸ್ಲಿಮೇತರರು ಭಾಗಿಯಾದ ಹಲವಾರು ಪ್ರಕರಣಗಳಿವೆ. ಮಾತ್ರವಲ್ಲದೆ ಬಿಜೆಪಿ ಭಜರಂಗದಳದ ಕಾರ್ಯಕರ್ತರು ಅಕ್ರಮ ಗೋ ವ್ಯಾಪಾರ ಪ್ರಕರಣದಲ್ಲಿ ಬಂಧನವಾದ ಇತಿಹಾಸ ಕೂಡ ಇದೆ. ಆದರೆ ಕಠಿಣ ಕ್ರಮಗಳು ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು 7-8 ಮುಸ್ಲಿಮರ ಮನೆಗಳನ್ನು ಸೀಝ್ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಇಲ್ಲಿ ಗೋಹತ್ಯೆಯನ್ನು ಮಹಾಪಾಪ ಎಂದು ಬಿಂಬಿಸುತ್ತಿದೆ. ಅದೇ ಬಿಜೆಪಿ ಸಂಘಪರಿವಾರ ನೆರೆ ರಾಜ್ಯಗಳಾದ ಗೋವ, ಕೇರಳ ಅಸ್ಸಾಂ ಹಾಗೂ ಮುಂತಾದ ರಾಜ್ಯಗಳಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವಾದಿಷ್ಟಕರವಾದ ಬೀಫ್ ಮಾಂಸವನ್ನು ತನ್ನ ನಾಗರಿಕರಿಗೆ ಸರಬರಾಜು ಮಾಡುತ್ತದೆ ಎಂಬ ಭರವಸೆಯನ್ನು ನೀಡುತ್ತಿದೆ. ಮಾತ್ರವಲ್ಲದೆ ಬೀಫನ್ನು ವಿದೇಶಕ್ಕೆ ರಫ್ತು ಮಾಡುವುದರಲ್ಲಿ ಯು.ಪಿ.ಎ ಆಡಳಿತಾವದಧಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಭಾರತ ಪ್ರಸ್ತುತ ಕೇಂದ್ರವನ್ನು ಆಳುವ ಬಿಜೆಪಿ ಸರ್ಕಾರ ಬಂದ ನಂತರbವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಹಾಗೂ ಉತ್ತರ ಪ್ರದೇಶದ ಬಿಜೆಪಿ ಸಂಸದ ಸಂಗೀತ್ ಸೋಮ್ ಸೇರಿದಂತೆ ಇನ್ನಿತರ ಕೆಲವು ಬಿಜೆಪಿ ಶಾಸಕರ ಒಡೆತನದ ಕಂಪನಿಯ ಮುಖಾಂತರವೇ ರಫ್ತು ಆಗುತ್ತಿರುವಾಗ ಈಕಡೆ ಯಾಕೆ ಬಿಜೆಪಿ ಹಾಗೂ ಕಾಂಗ್ರೆಸ್ ಜಂಟಿಯಾಗಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಶ್ವರಮಂಗಳದ ಘಟನೆ ಬೆಳಿಗ್ಗೆ 5.30 ಕ್ಕೆ ನಡೆದರೂ ಗೋವುಗಳನ್ನು ವಾಹನದಿಂದ ಇಳಿಸಲು ಸುಮಾರು 4-5 ಗಂಟೆ ಕಾದು ಬಿಜೆಪಿ ಮುಖಂಡ ಗಡಿಪಾರು ಆದೇಶ ಪಡೆದ ರೌಡಿಶೀಟರ್ ಪುತ್ತಿಲ ಬರುವವರೆಗೂ ಕಾಯುವ ಅವಶ್ಯಕತೆ ಏನಿತ್ತು? ಪೋಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸ್ಥಳೀಯರು ಇಳಿಸಲು ಸಹಾಯ ಮಾಡುವುದು ಸಹಜವಾದದ್ದು ಎಂದಿದ್ದಾರೆ. ಈಶ್ವರಮಂಗಳದಿಂದ ಸುಮಾರು 40 ಕಿ.ಮಿ ದೂರದ ನರಿಮೊಗರು ಸಮೀಪದ ಅರುಣ್ ಕುಮಾರ್ ಪುತ್ತಿಲ ಸ್ಥಳೀಯನಾಗುವುದು ಹೇಗೆ? ಶೂಟೌಟ್ ಮಾಡಿ ಬಂಧಿಸಲಿಕ್ಕೆ ಸಾಧ್ಯವಾದ ಪೋಲೀಸರಿಗೆ ಗೋವನ್ನು ಇಳಿಸಲು ಸ್ಥಳೀಯರ ವೇಶದಲ್ಲಿದ್ದ ಸಂಘಪರಿವಾರ ಕಾರ್ಯಕರ್ತರೇ ಆಗಬೇಕಿತ್ತಾ?
ಈ ಹಿಂದೆಯೂ ಭಜರಂಗದಳ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಮಾಡಿದ ಇತಿಹಾಸ ಇದೆ. ಪ್ರಸ್ತುತ ದ.ಕ ಜಿಲ್ಲೆಯಲ್ಲಿ ದಕ್ಷ ಪೋಲೀಸ್ ವರಿಷ್ಠಾಧಿಕಾರಿ ಬಂದ ನಂತರ ಇಂತಹ ಜಂಟಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಆದರೆ ಶೂಟೌಟ್ ನಂತರದ ಬೆಳವಣಿಗೆಗಳನ್ನು ಗಮನಿಸುವಾಗ ಸಂಘಪರಿವಾರಕ್ಕೆ ಕೂಡ ಇಂತಹ ಘಟನೆ ನಡೆಯುತ್ತದೆ ಎಂಬ ಪೂರ್ವ ಮಾಹಿತಿ ಇದ್ದಂತೆ ಕಾಣುತ್ತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಈ ಒಂದು ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕವಾದ ಸಂಶಯಗಳು ಇರುವುದರಿಂದ ಸರ್ಕಾರ ಈ ಒಂದು ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಿ ಘಟನೆಯ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಬೇಕೆಂದು ಅನ್ವರ್ ಸಾದತ್ ಬಜತ್ತೂರು ರವರು ಒತ್ತಾಯಿಸಿದ್ದಾರೆ.


