ಮುಂಬಯಿ (ಆರ್‌ಬಿಐ), ನ.೦೮: ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ (ಎನ್‌ಆರ್‌ಐ) ಕರ್ನಾಟಕ ಸರ್ಕಾರವು ಪ್ರತ್ಯೇಕ ಇಲಾಖೆಯನ್ನು ರಚಿಸುವ ಕುರಿತು ಚುನಾವಣಾ ಸಮಯದಲ್ಲಿ ನೀಡಿದ್ದ ಗ್ಯಾರಂಟಿಯನ್ನು ಗೌರವಿಸಿ, ಆ ಭರವಸೆಯನ್ನು ಜಾರಿಗೆ ತರಲು ವಿಳಂಬ ಮಾಡುತ್ತಿರುವ ಬಗ್ಗೆ ಅನಿವಾಸಿ ಭಾರತೀಯ (ಗಲ್ಫ್) ದುಬಾಯಿ ಅಲ್ಲಿನ ಪ್ರತಿಷ್ಠಿತ ಎನ್‌ಆರ್‌ಐ ಉದ್ಯಮಿ ಮತ್ತು ಕೊಡುಗೈದಾನಿ ಡಾ| ರೊನಾಲ್ಡ್ ಕೋಲಾಸೊ ಪ್ರಶ್ನಿಸಿದರು.

ಅನಿವಾಸಿ ಭಾರತೀಯ ಸಮಿತಿ (ಎನ್‌ಆರ್‌ಐ ಫೋರಂ ಕರ್ನಾಟಕ) ಇದರ ಉಪಾಧ್ಯಕ್ಷೆ ಆಗಿದ್ದು, ಕರ್ನಾಟಕ ರಾಜ್ಯ ವಿಧಾನ ಪರಿಷತ್ತ್‌ನ ಸದಸ್ಯೆಯಾಗಿ ಆಯ್ಕೆಯಾದ ಡಾ| ಆರತಿ ಕೃಷ್ಣ ಅವರಿಗೆ ಕಳೆದ ಶುಕ್ರವಾರ ದುಬಾಯಿಯ ಹೋಟೆಲ್ ಗ್ರ್ಯಾಂಡ್ ಹಯತ್‌ನಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ| ರೊನಾಲ್ಡ್ ಕೋಲಾಸೊ, ಸರಕಾರವು ಜಾಗತಿಕ ಕನ್ನಡ ಸಮುದಾಯದ ಹಿತಕ್ಕಾಗಿ ನೀಡಿದ ಭರವಸೆಯನ್ನು ತ್ವರಿತವಾಗಿ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದ ಚುನಾವಣಾ ಘೋಷಣಾಪತ್ರವನ್ನು ಮೆಲುಕು ಹಾಕಿದ್ದು, ವಿದೇಶದಲ್ಲಿ ವಾಸಿಸುವ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವ ಭರವಸೆ ಕಾಂಗ್ರೆಸ್ ನೀಡಿತ್ತು. ಹಲವು ಭರವಸೆಗಳ ಆಧಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಈ ವಿಶೇಷ ಭರವಸೆ ಇನ್ನೂ ಈಡೇರಿಲ್ಲ. ವಿದೇಶದಲ್ಲಿರುವ ಕನ್ನಡಿಗರು ಇನ್ನೆಷ್ಟು ಕಾಲ ಕಾಯಬೇಕು ಎಂದು ಪ್ರಶ್ನಿಸಿದರು.

ಪ್ರಸ್ತುತ ಡಾ| ಆರತಿ ಕೃಷ್ಣ ಅವರ ನೇತೃತ್ವದಲ್ಲಿರುವ ಎನ್‌ಆರ್‌ಐ ಫೋರಂ ಕರ್ನಾಟಕವು ಕನ್ನಡಿಗರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದರೂ, ಅದರ ಅಧಿಕಾರ ಹಾಗೂ ಬಜೆಟ್ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೆ ಎಂದರು. ರಾಜ್ಯವು ಕೇರಳದ ಮಾದರಿಯನ್ನು ಅನುಸರಿಸಿ ರಾಜ್ಯದ ವಲಸೆ ಜನಾಂಗಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಬೇಕು. ಆಗ ಮಾತ್ರ ವಿದೇಶದಲ್ಲಿರುವ ಕನ್ನಡಿಗರ ಸಮಸ್ಯೆ, ಕಷ್ಟಗಳು ಹಾಗೂ ಕಲ್ಯಾಣದ ವಿಚಾರಗಳನ್ನು ಪರಿಣಾಮಕಾರಿಯಾಗಿ ನೋಡಿಕೊಳ್ಳಲು ಸಾಧ್ಯ ಎಂದೂ ಡಾ| ಕೋಲಾಸೊ ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ| ಯು.ಟಿ ಇಫ್ತಿಖಾರ್ ಅಲಿ ಗೌರವ ಅತಿಥಿsಯಾಗಿ ಭಾಗವಹಿಸಿ, ಯುಎಇ ಕನ್ನಡ ಭವನ ಯೋಜನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.ಕರ್ನಾಟಕ ಎನ್‌ಆರ್‌ಐ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಮಾತನಾಡಿ ಯುಎಇ ಕನ್ನಡ ಭವನದ ಉದ್ದೇಶಕ್ಕಾಗಿ ರೂಪಾಯಿ ೨.೫ ಕೋಟಿ ದೇಣಿಗೆಯನ್ನು ಘೋಷಿಸಿದರು. ಕನ್ನಡ ಭವನವು ಯುಎಇಯ ಪ್ರತಿಯೊಬ್ಬ ಕನ್ನಡಿಗನಿಗೂ ಒಂದು ಏಕತೆಯ ಸಂಕೇತವಾಗಿ ಮೂಡಲಿ ಎಂದು ಆಶಯ ವ್ಯಕ್ತಪಡಿಸಿದರು.
ಆರತಿ ಕೃಷ್ಣ ಗೌರವಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನಿತ್ತು ಮಾತನಾಡಿ ಅಬಿವಂದನೆ ಅರ್ಪಿಸಿ, ನಾನು ಮುಂದುವರೆಯುವಂತೆ ವಿದೇಶದ ಕನ್ನಡಿಗರ ಪರವಾಗಿ ಧ್ವನಿಯಾಗುತ್ತೇನೆ ಮತ್ತು ಸರ್ಕಾರದ ಬೆಂಬಲ ಪ್ರತಿಯೊಬ್ಬ ಕನ್ನಡಿಗನಿಗೂ ತಲುಪುವಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು ಹಾಗೂ ಕರ್ನಾಟಕ ಸಂಘ ದುಬಾಯಿ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಕೆಎನ್‌ಆರ್‌ಐ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದುಬಾಯಿ ಬಿಸಿಎಫ್ ಅಧ್ಯಕ್ಷ ಡಾ| ಬಿ.ಕೆ.ಯೂಸುಫ್ ಸೇರಿದಂತೆ ಯುಎಇಯ ವಿವಿಧ ೩೬ಕ್ಕೂ ಹೆಚ್ಚು ಕನ್ನಡ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು. ಡಾ| ಆರತಿ ಕೃಷ್ಣ ಅವರನ್ನು ಅಭಿನಂದಿಸಿದರು. ಹಿದಾಯತ್ ಅಡ್ಡೂರು ಸ್ವಾಗತಿಸಿದರು. ಶಶಿಧರ್ ನಾಗರಾಜಪ್ಪ ನಿರೂಪಣೆ ನಿರ್ವಹಿಸಿ ವಂದಿಸಿದರು.


