ಚಿತ್ರದುರ್ಗ: ಚಿತ್ರದುರ್ಗದ ಬಳಿ ಸಂಭವಿಸಿದ ಭೀಕರ ಬಸ್ ದುರಂತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ‘ಸೀ ಬರ್ಡ್’ (Seabird) ಖಾಸಗಿ ಬಸ್ (KA-01 AE-5217) ಡಿಸೆಂಬರ್ 24, 2025ರ ತಡರಾತ್ರಿ ಭೀಕರ ಅಪಘಾತಕ್ಕೊಳಗಾಗಿ ಬೆಂಕಿಗೆ ಆಹುತಿಯಾಗಿದೆ. ಅಪಘಾತದ ವೇಳೆ ಬಸ್‌ನಲ್ಲಿ ಒಟ್ಟು 29 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಘಟನೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಹಾಗೂ ಹೆಚ್ಚಿನ ತನಿಖೆ ಮುಂದುವರಿದಿದೆ.

ಚಿತ್ರದುರ್ಗ ಸಮೀಪ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ರಾಜ್ಯಾದ್ಯಂತ ಆಘಾತ ಮೂಡಿಸಿದೆ. ರಾತ್ರಿ ಸುಮಾರು 2.45ರ ವೇಳೆಗೆ ನಡೆದ ಈ ದುರಂತದಲ್ಲಿ, ಖಾಸಗಿ ಐಷಾರಾಮಿ ಸ್ಲೀಪರ್ ಬಸ್ ಕೇವಲ 10 ಸೆಕೆಂಡುಗಳಲ್ಲಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ನಿದ್ದೆಯಲ್ಲಿದ್ದ ಅನೇಕ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರಿನಿಂದ ಹೊರಟ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಮನೆಗೆ ತೆರಳುತ್ತಿದ್ದ ‘ಸಿ ಬರ್ಡ್’ ಖಾಸಗಿ ಬಸ್‌ನಲ್ಲಿ ಒಟ್ಟು 29 ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ. ಈ ವೇಳೆ ವಿರುದ್ಧ ದಿಕ್ಕಿನಿಂದ ಅತಿವೇಗವಾಗಿ ಬಂದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಮೊದಲು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು, ಬಳಿಕ ಎದುರಿನ ಲೇನ್‌ಗೆ ನುಗ್ಗಿ ಬಸ್‌ಗೆ ಅಪ್ಪಳಿಸಿದೆ.

ಡಿಕ್ಕಿಯ ರಭಸಕ್ಕೆ ಬಸ್‌ನ ಡೀಸೆಲ್ ಟ್ಯಾಂಕ್ ಭಾಗಕ್ಕೆ ನೇರವಾಗಿ ಗುದ್ದಿದ ಲಾರಿ, ಮೊದಲು ಬೆಂಕಿಗೆ ಆಹುತಿಯಾಗಿದೆ. ಕ್ಷಣಾರ್ಧದಲ್ಲಿ ಬಸ್‌ನಲ್ಲೂ ಬೆಂಕಿ ವ್ಯಾಪಿಸಿದ್ದು, ದಟ್ಟ ಹೊಗೆ ಸಂಪೂರ್ಣ ಬಸ್ ಅನ್ನು ಆವರಿಸಿಕೊಂಡಿದೆ. ಪ್ರಯಾಣಿಕರು ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ ಬಸ್ ಸಂಪೂರ್ಣವಾಗಿ ಅಗ್ನಿಗೋಳವಾಗಿ ಮಾರ್ಪಟ್ಟಿದೆ.
ರಾತ್ರಿ ಸಮಯವಾಗಿದ್ದರಿಂದ ಬಹುತೇಕ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ಬೆಂಕಿ ಹತ್ತಿದ ತಕ್ಷಣ ಎಚ್ಚರಗೊಂಡ ಕೆಲವರು ಹೊರಬರಲು ಯತ್ನಿಸಿದರೂ, ಭಾರೀ ಉರಿ ಮತ್ತು ಹೊಗೆ ಕಾರಣದಿಂದ ಕೆಳಗೆ ಇಳಿಯಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ಕನಿಷ್ಠ 20ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಕೆಲವರು ಗಂಭೀರವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಅವರನ್ನು ತಕ್ಷಣವೇ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ 16 ಪ್ರಯಾಣಿಕರ ಗುರುತು ಪತ್ತೆಯಾಗಿದ್ದು, ಉಳಿದವರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.
ಅಗ್ನಿಯ ತೀವ್ರತೆ ಎಷ್ಟಿತ್ತೆಂದರೆ, ಐಷಾರಾಮಿ ಸ್ಲೀಪರ್ ಕೋಚ್ ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಸುಟ್ಟು ಅಸ್ಥಿಪಂಜರದಂತಾಗಿದೆ. ರಸ್ತೆ ಮಧ್ಯೆ ಉರಿಯುತ್ತಿದ್ದ ಬಸ್ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರೂ, ಆಗಲೇ ಅಪಾರ ಹಾನಿ ಸಂಭವಿಸಿತ್ತು.
‘ಇನ್ನೇನು ಮನೆ ಸೇರ್ತೀವಿ’ ಎಂಬ ಆಶೆಯೊಂದಿಗೆ ಪ್ರಯಾಣಿಸುತ್ತಿದ್ದ ಹಲವಾರು ಕುಟುಂಬಗಳ ಬದುಕು ಕೇವಲ 10 ಸೆಕೆಂಡುಗಳಲ್ಲಿ ನುಚ್ಚು ನೂರಾಗಿದೆ. ಈ ಭೀಕರ ದುರಂತಕ್ಕೆ ನಿಖರ ಕಾರಣ ಏನು? ಲಾರಿ ಚಾಲಕನ ನಿರ್ಲಕ್ಷ್ಯವೇ ಅಥವಾ ವಿಧಿಯ ಕ್ರೂರ ಆಟವೇ? ಎಂಬ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟ ಉತ್ತರ ಸಿಗಲಿದೆ


