ದೇರಳಕಟ್ಟೆ: ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜು ದೇರಳಕಟ್ಟೆ ಇದರ 2025-26ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮವು ಡಿ.24 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿ ಡಾಕ್ಟರ್ ಅಶ್ವಿನಿ ದತ್.ಆರ್ ಶೈಕ್ಷಣಿಕ ಡೀನ್ ಮತ್ತು ಯೆನೆಪೋಯ (ಪರಿಗಣಿತ ವಿಶ್ವವಿದ್ಯಾನಿಲಯ) ವೈದ್ಯಕೀಯ ಕಾಲೇಜಿನ ಶರೀರಶಾಸ್ತ್ರ ಪ್ರಾಧ್ಯಾಪಕರು, ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, “ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಮ್ಮ ಆಸಕ್ತಿದಾಯಕ ವೃತ್ತಿಗಳನ್ನು ಹೊಂದಬೇಕು,ಇದರಿಂದ ಸಂತೋಷದಾಯಕ ಜೀವನ ನಮ್ಮದಾಗುತ್ತದೆ” ಎಂದರು.

ಕಾರ್ಯಕ್ರಮದ ಗೌರವಾನ್ವಿತ ಅತಿಥಿ ಪ್ರೊ.ಡಾ.ಎಂ. ಅಬ್ದುಲ್ ರಹಿಮಾನ್, ಕಣ್ಣೂರ್ ಮತ್ತು ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿಗಳು, ಕಣಚೂರ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸಲಹಾ ಸಮಿತಿಯ ಅಧ್ಯಕ್ಷರು, ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ಹೇಳುತ್ತಾ, “ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕರುಣೆ ಸಹಾನುಭೂತಿಗಳನ್ನು ಹೊಂದಿ ತಮ್ಮಪ್ರತಿಭೆಯ ಮೂಲಕ ಆಧುನಿಕ ಶಿಕ್ಷಣವನ್ನು ಪಡೆದು, ಭವಿಷ್ಯವನ್ನು ಉಜ್ವಲ ಗೊಳಿಸಬೇಕು” ಎಂದರು.
ಶ್ರೀ ಅಬ್ದುಲ್ ರೆಹಮಾನ್ ಸಂಚಾಲಕರು, ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಇವರು ವಿದ್ಯಾರ್ಥಿಗಳ ಕುರಿತು ಮಾತನಾಡುತ್ತಾ, “ವ್ಯಕ್ತಿಯ ಯಶಸ್ಸಿಗೆ ತನ್ನ ವೃತ್ತಿಯಲ್ಲಿ ಸಹಾನುಭೂತಿ ಮತ್ತು ಕರ್ತವ್ಯನಿಷ್ಠೆ ಬಹಳ ಮುಖ್ಯ, ಶಿಕ್ಷಣ ವ್ಯಕ್ತಿಗೆ ಶಕ್ತಿ ಕೊಡುತ್ತದೆ, ವಿದ್ಯಾರ್ಥಿಗಳು ಇದನ್ನು ಗಳಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ 2025 – 26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ವಾರ್ಷಿಕ ಪ್ರತಿಭಾ ಸಂಚಿಕೆ (ಕಾಲೇಜ್ ಮ್ಯಾಗಝಿನ್) ಬಿಡುಗಡೆ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು.
ಕಣಚೂರು ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಇಕ್ಬಾಲ್ ಅಹಮದ್ ಯು ಟಿ, ಕಣಚೂರು ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಶ್ರೀಮತಿ ಕ್ಯಾರನ್ ಡಿಸೋಜ, ಮತ್ತು ಪ್ರೈಮರಿ ಸ್ಕೂಲಿನ ಪ್ರಾಂಶುಪಾಲರಾದ ಲಿನೆಟ್ ಡಿಸೋಜಾ ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಶಾ ಅಲೀನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿಯವರಾದ ಶ್ರೀಮತಿ ಚೇತನ ವಿದ್ಯಾರ್ಥಿಗಳ ಬಹುಮಾನ ವಿತರಣಾ ಪಟ್ಟಿಯನ್ನು ಓದಿದರು. ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶಾಹಿದಾ ಬಿ. ಎಂ. ಅತಿಥಿಗಳನ್ನು ಸ್ವಾಗತಿಸಿದರೆ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಶಿಭಾನಿ ಅತಿಥಿಗಳನ್ನು ಪರಿಚಯಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶ್ಯಾರನ್ ಶಲೋನಿ ಮಾಬೆನ್ ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾರ್ಥಿ ನಾಯಕಿ ಆಯಿಶಾ ಅಲೀನಾ ವಂದಿಸಿದರು.


