ಉಳ್ಳಾಲ: ಮದನಿ ತಂಙಳ್ ರವರ (ರ.) ಸಾನ್ನಿಧ್ಯದಿಂದ ಪರಿಪಾವನಗೊಂಡಿರುವ ಉಳ್ಳಾಲದ ಪವಿತ್ರ ನೆಲದಲ್ಲಿ ಇದೀಗ ನೂರೇ ಅಜ್ಮೀರ್ ಸಂಗಮದ ಮಹಾಸಿಂಚನ!
ಇದೇ ಎಪ್ರಿಲ್ 4 ರಂದು ಶನಿವಾರ ಸಂಜೆ ವಲಿಯುದ್ದೀನ್ ಫೈಝಿಯವರ ನೇತೃತ್ವದಲ್ಲಿ ಕೇರಳ – ಕರ್ನಾಟಕದ ಭಾವುಕ ಜನಸಾಗರದಲ್ಲಿ ನಡೆಯುತ್ತಿರುವ ಶಿರೋಧಾರ್ಯ ಆಧ್ಯಾತ್ಮಿಕ ಸಂಗಮ.
ಇದು ಸ್ಥಳೀಯ ಉತ್ಸಾಹೀ ಆಧ್ಯಾತ್ಮಿಕಾಸಕ್ತರು ನಡೆಸುತ್ತಾ ಬಂದಿರುವ ನೂರೇ ಅಜ್ಮೀರಿನ ಐದನೆಯ ವಾರ್ಷಿಕ. ಈ ವಾರ್ಷಿಕ ಮಹಾಸಮಾವೇಶವನ್ನು ಐತಿಹಾಸಿಕಗೊಳಿಸುವ ಸಿದ್ಧತೆ ಸಮರೋಪಾಧಿಯಲ್ಲಿ ನಡೆಯುತ್ತಿದೆ. ಸ್ಥಳೀಯರ ಅವಿಶ್ರಾಂತ ಪರಿಶ್ರಮಕ್ಕೆ ವೈನ್ ಸ್ಟೋನ್ ಶರೀಫ್ ಹಾಜಿ ಹಾಗೂ ಇಕ್ಬಾಲ್ ಬಾಳಿಲ ಅವರ ಸಮರ್ಥ ನಾಯಕತ್ವವು ಚೈತನ್ಯ ತುಂಬುತ್ತಿದೆ.

ಶಾಲಾ ರಜೆಯ ಸಂದರ್ಭದಲ್ಲಿ ನಮ್ಮ ಮಕ್ಕಳ ರಜೆಯನ್ನು ಇಂತಹ ಆಧ್ಯಾತ್ಮಿಕ ಮಜ್ಲಿಸ್ ಗಳಿಗೂ ಬಳಸಿ ಎಳೆಯ ಮನಗಳ ಇಳೆಯಲ್ಲಿ ಆಧ್ಯಾತ್ಮಿಕತೆಯ ಬೀಜ ಬಿತ್ತಲು ಇದು ಸಕಾಲ. ಹೆತ್ತವರು ತಮ್ಮ ಕಂದಮ್ಮಗಳೊಡನೆ ಭಾಗವಹಿಸಿರಿ. ಆಲಿಮರು, ಸಾದಾತ್ ಗಳು, ಮುತಅಲ್ಲಿಮರು, ಸಜ್ಜನರಾದ ಮುಉಮಿನ್ ಸ್ತ್ರೀ ಪುರುಷರು, ಅಲ್ಲಾಹನ ಧರ್ಮಕ್ಕೆ ನಿಷ್ಠರಾಗಿ ಬಾಳು ಸವೆಸಿದ ಹಿರಿಯರು ಮುಂತಾದವರೆಲ್ಲ ಸೇರಿ ದಯಾಮಯನಾದ ಅಲ್ಲಾಹನೆಡೆಗೆ ಕೈಯೆತ್ತಿ ಆಮೀನ್ ಹೇಳುವ ದುಆ ಈಡೇರುವುದು ಖಂಡಿತ ನಿರೀಕ್ಷಿತವಾದುದು.

ಇಂತಹ ಸದವಕಾಶವನ್ನು ಸದುಪಯೋಗ ಪಡಿಸೋಣ. ನಮ್ಮ ಮತ್ತು ನಮ್ಮ ಮಕ್ಕಳ ಇಹ-ಪರ ಯಶಸ್ಸು ಮತ್ತು ಎಲ್ಲಾ ವಿಧ ಅನಾಹುತಗಳಿಂದ ರಕ್ಷಣೆಗೆ ಕಾರಣವಾಗುವ ಇಂತಹ ಅಪೂರ್ವ ಸಂದರ್ಭಗಳನ್ನು ಬಳಸಿಕೊಳ್ಳೋಣ.
ನೆನಪಿಡಿ: ಇದೇ ಎಪ್ರಿಲ್ 4 ರಂದು ಶನಿವಾರ ಸಂಜೆ ಪವಿತ್ರ ನೂರೇ ಅಜ್ಮೀರ್ ಸಂಗಮದಲ್ಲಿ ಫ್ಯಾಮಿಲಿ ಸಮೇತ ನಾನಿರುತ್ತೇನೆ. (ಇನ್ ಶಾ ಅಲ್ಲಾಹ್)
ನೀವೂ ಇರುತ್ತೀರಲ್ಲ, ಫ್ಯಾಮಿಲಿ ಸಮೇತ?
ಡಿ.ಐ ಅಬೂಬಕ್ಕರ್ ಕೈರಂಗಳ


