ಮೂಡಬಿದಿರೆ: ಸುಮಾರು ೮ ಶತಮಾನಗಳಿಗೂ ಹೆಚ್ಚಿನ ಇತಿಹಾಸವಿರುವ ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾರ್ಯ ಬಹುತೇಕ ಪೂರ್ಣಗೊಳ್ಳುತ್ತಿದ್ದು ಎ. ೨೬ರಿಂದ ಮೇ.೧ರವರೆಗೆ ಶ್ರೀ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್ ತಿಳಿಸಿದರು.

ಅವರು ಗುರುವಾರ ದೇವಸ್ಥಾನದ ಆವರಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ಮಾತನಾಡಿದರು. ೨೬ರಂದು ಪೂರ್ವಾಹ್ನ ಋತ್ವಿಜರ ಆಗಮನದೊಂದಿಗೆ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಚಾಲನೆ ದೊರೆಯಲಿದ್ದು ಅಂದು ಮಧ್ಯಾಹ್ನ ಮೂಡುಬಿದಿರೆ ಸ್ವರಾಜ್ಯ ಮೈದಾನದ ಪುರಾತನ ಮಾರಿಗುಡಿಯಿಂದ ಹೊಸಂಗಡಿ ದೇವಸ್ಥಾನದ ವರೆಗೆ ಭವ್ಯವಾದ ಹಸಿರು ಹೊರೆಕಾಣಿಕೆ ಮೆರವಣಿಗೆ ಸಾಗಿಬರಲಿದ್ದು ಶ್ರೀ ದೇವರಿಗೆ ಹೊರೆಕಾಣಿಕೆ ಸಮರ್ಪಣೆಯಾಗಲಿದೆ.
ಎ. ೨೯ರಂದು ಪೂರ್ವಾಹ್ನ ಶ್ರೀ ಗೋಪಾಲಕೃಷ್ಣ ಸಪರಿವಾರ ದೇವರುಗಳ ಪುನಃ ಪ್ರತಿಷ್ಠೆ, ಅಷ್ಟಬಂಧ ಲೇಪನ, ಧ್ವಜ ಪ್ರತಿಷ್ಠೆ, ಸಂಜೆ ಬಲಿಶಿಲಾ ಪ್ರತಿಷ್ಠೆ, ಅಭಿಷೇಕ ಪರ್ವಸೇವೆ ನೆರವೇರಲಿದೆ. ಮೇ. ೧ರಂದು ಬೆಳಿಗ್ಗೆ ಗಂಟೆ 7.30ಕ್ಕೆ ಸಹಸ್ರಕುಂಭ ಬ್ರಹ್ಮಕಲಶಾಭಿಷೇಕ ನೆರವೇರಲಿದೆ ಎಂದರು. ಬಿನ್ನಾಣಿ ಸೀಮೆಗೆ ಒಳಪಟ್ಟ ಮಾರೂರು, ಕಲ್ಲಬೆಟ್ಟು, ಕರಿಂಜೆ, ಮಾರ್ನಾಡು, ಕರ್ಪೆ, ಮಾರ್ಪಾಡಿ, ತೋಡಾರು, ಪುಚ್ಚಮೊಗರು, ಹೊಸಬೆಟ್ಟು ಹೀಗೆ ಒಂಭತ್ತು ಮಾಗಣೆಗಳ ೧೨ಕ್ಕೂ ಹೆಚ್ಚು ಗ್ರಾಮಗಳ ಭಕ್ತರು ಆರಾಧಿಸಿಕೊಂಡು ಬಂದಿರುವ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನವು ದೈವ-ದೇವರ ಆರಾಧನೆಯ ಸಮ್ಮಿಲನ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದು ಶ್ರೀ ಕೊಡಮಣಿತ್ತಾಯ, ರಕ್ತೇಶ್ವರಿ ಮತ್ತು ಪಂಜುರ್ಲಿ ದೈವಗಳು ಈ ಸನ್ನಿಧಾನದಲ್ಲಿ ನೆಲೆನಿಂತಿವೆ.
ಮೂಡುಬಿದಿರೆಯಿಂದ ವೇಣೂರು ಮಾರ್ಗವಾಗಿ ಸುಮಾರು ೧೦ ಕಿ.ಮೀ. ಹಾಗೂ ಬೆಳ್ತಂಗಡಿಯಿಂದ ೨೩ ಕಿ.ಮೀ. ದೂರದಲ್ಲಿರುವ ಹೊಸಂಗಡಿ-ಮಾರೂರು ಗ್ರಾಮದಲ್ಲಿರುವ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನವು ಸಮಗ್ರ ಜೀರ್ಣೋದ್ಧಾರದಿಂದ ನವೀಕರಣಗೊಂಡಿದ್ದು ಕಂಗೊಳಿಸುತ್ತಿದೆ.
ಶ್ರದ್ದಾ-ಭಕ್ತಿ, ನಂಬಿಕೆ ಹಾಗೂ ವೈಶಿಷ್ಟ್ಯಪೂರ್ಣ ಆಚರಣೆಯ ಪುಣ್ಯಸ್ಥಳವಾಗಿರುವ ಶ್ರೀ ಕ್ಷೇತ್ರದಲ್ಲಿ ಶ್ರೀ ಕೊಡಮಣಿತ್ತಾಯ ಹಾಗೂ ನೆಲೆಯಾಗಿರುವ ಶ್ರೀ ಗೋಪಾಲಕೃಷ್ಣ ದೇವರು ಆಸ್ತಿಕರ ಹಾಗೂ ಭಕ್ತಾದಿಗಳ ಸರ್ವಾಭೀಷ್ಟ ಫಲಪ್ರದಾಯಕನಾಗಿ ಪ್ರಸಿದ್ಧನಾಗಿದ್ದಾನೆ. ಶಿಷ್ಟರಕ್ಷಕ ಹಾಗೂ ದುಷ್ಟಶಿಕ್ಷಕನಾಗಿ ಕಾರಣಿಕ ಮೆರೆದಿರುವ ಅನೇಕ ನಿದರ್ಶನಗಳು ಕಂಡು ಬರುತ್ತವೆ. ಸುಮಾರು 100 ವರ್ಷಗಳ ಹಿಂದೆ ಮಾರೂರು-ಹೊಸಂಗಡಿ ಅರಮನೆಯ ಹಾಗೂ ಊರ-ಪರವೂರ ದೈವಭಕ್ತರ ಸಹಕಾರದೊಂದಿಗೆ ದೇವಸ್ಥಾನದ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ನೆರವೇರಿತ್ತು ಎಂದು ಮಾಹಿತಿ ನೀಡಿದರು.
ಶತಮಾನಗಳಿಂದ ಪೂಜಿಸಲ್ಪಡುತ್ತಾ ಬಂದಿರುವ ಈ ಪಾವನ ಸನ್ನಿಧಾನದಲ್ಲಿ ಇಂದು ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ.ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಹಲವು ದಾನಿಗಳು ಕೈ ಜೋಡಿಸಿದ್ದು, ಸಮಸ್ತ ಭಗವದ್ಭಕ್ತರು ಈ ಮಹತ್ವದ ಧಾರ್ಮಿಕ ಕಾರ್ಯದಲ್ಲಿ ಉದಾರ ಮನಸ್ಸಿನಿಂದ ದೇಣಿಗೆ ಮತ್ತು ಸಹಕಾರ ನೀಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ವಿನಂತಿಸಿದೆ.
ದೇವಸ್ಥಾನ ಪುನರ್ನಿರ್ಮಾಣದ ವಿವಿಧ ಕಾಮಗಾರಿಗಳು ಈಗಾಗಲೇ ಸುಮಾರು ರೂ. ೬ ಕೋಟಿ ವೆಚ್ಚದಲ್ಲಿ ಪೂರ್ಣಗೊಳ್ಳುತ್ತಿದೆ. ಪಶ್ಚಿಮಾಭಿಮುಖವಾಗಿ ಪ್ರವೇಶದ್ವಾರವಿರುವ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಗರ್ಭಗುಡಿ, ಸುಂದರ ಕೆತ್ತನೆಯ ಮುಖಮಂಟಪ ಮತ್ತು ವಿಶಾಲವಾದ ಗೋಪುರದ ನಿರ್ಮಾಣವನ್ನು ಊರ ಮತ್ತು ಪರವೂರ ದಾನಿಗಳ ಸಹಕಾರದಲ್ಲಿ ಮಾಡಲಾಗಿದೆ. ಗರ್ಭಗುಡಿಯ ಮುಂಭಾಗದಲ್ಲಿರುವ ಸುಂದರವಾದ ತೀರ್ಥ ಮಂಟಪವನ್ನು ಮಾರೂರುಗುತ್ತು ಕುಟುಂಬಸ್ಥರು ನಿರ್ಮಿಸಿ ಕೊಟ್ಟಿದ್ದಾರೆ. ಹಿಂದೆ ಶ್ರೀ ದೇವರ ಗರ್ಭಗುಡಿಯಲ್ಲಿದ್ದ ಹನುಮಂತ ಮತ್ತು ಗಣಪತಿಯ ಪುಟ್ಟ ವಿಗ್ರಹಗಳನ್ನೂ ಪೂಜಿಸಿಕೊಂಡು ಬರಲಾಗುತ್ತಿದ್ದು ಈ ಎರಡೂ ದೇವರುಗಳಿಗೆ ದೇವಸ್ಥಾನದ ಗೋಪುರದೊಳಗೆ ಪ್ರತ್ಯೇಕ ಗುಡಿಗಳನ್ನು ನಿರ್ಮಿಸಲಾಗಿದೆ.
ಗೋಪುರದ ವಾಯುವ್ಯ ದಿಕ್ಕಿನಲ್ಲಿ ಮಿತ್ತಬೆಟ್ಟು ಕುಟುಂಬಸ್ಥರ ವತಿಯಿಂದ ಹನುಮಂತ ದೇವರ ಗುಡಿ ಮತ್ತು ನೈರುತ್ಯ ದಿಕ್ಕಿನಲ್ಲಿ ಹಾಸನದ ಸುಬ್ರಹ್ಮಣ್ಯೇಶ್ವರ ಮೋಟಾರ್ಸ್ ಸಂಸ್ಥೆಯ ಅಶೋಕ್ ಕುಮಾರ್ ತುಮಕೂರು ಅವರ ವತಿಯಿಂದ ಶ್ರೀ ಗಣಪತಿ ದೇವರ ಗುಡಿ ನಿರ್ಮಾಣವಾಗಿದೆ. ಹನುಮಂತ ಗುಡಿಯ ಪಕ್ಕದಲ್ಲಿ ಉಗ್ರಾಣ ಮತ್ತು ಗಣಪತಿ ಗುಡಿಯ ಪಕ್ಕದಲ್ಲಿ ಶ್ರೀ ಕೊಡಮಣಿತ್ತಾಯ ಸ್ಥಾನ ನಿರ್ಮಿಸಲಾಗಿದೆ. ಈಶಾನ್ಯ ದಿಕ್ಕಿನಲ್ಲಿ ತಂತ್ರಿಗಳ ಕೊಠಡಿ ಮತ್ತು ತೀರ್ಥಭಾವಿ, ಆಗ್ನೇಯದಲ್ಲಿ ನೈವೇದ್ಯ ಕೊಠಡಿಯೂ ನಿರ್ಮಾಣವಾಗಿದೆ. ಗೋಪುರದ ಹೊರಗೆ ಪ್ರವೇಶದ್ವಾರದ ಮುಂಭಾಗದಲ್ಲಿ ಕುಂಭಕಂಠಿಣಿ ಜಾತ್ರೋತ್ಸವದ ಕಟ್ಟೆ ಮತ್ತು ನೈರುತ್ಯ ಭಾಗದಲ್ಲಿ ದೇವಸ್ಥಾನದ ಕಾರ್ಯಾಲಯ ನಿರ್ಮಾಣವಾಗಿದೆ. ದೇವಸ್ಥಾನದ ನೂತನ ಧ್ವಜಸ್ತಂಭ ಸಹಿತ ಧ್ವಜಕಟ್ಟೆಯನ್ನು ಮಾರ್ನಾಡು ಗ್ರಾಮಸ್ಥರು ಕೊಡುಗೆಯಾಗಿ ಸಮರ್ಪಿಸಿದ್ದಾರೆ. ಒಟ್ಟಿನಲ್ಲಿ ದೇವಸ್ಥಾನವು ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದೆ.
ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶಂಭು ಎನ್. ಶೆಟ್ಟಿ , ಆಡಳಿತ ಮೊಕ್ತೇಸರರು ಸಂಪತ್ ಕುಮಾರ್ ಶೆಟ್ಟಿ , ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ. ಜೀವಂಧರ ಕುಮಾರ್, ಪ್ರಧಾನ ಕಾಯ೯ದಶಿ೯ ರವಿಪ್ರಸಾದ್ ಕೆ. ಶೆಟ್ಟಿ, ಉಪಾಧ್ಯಕ್ಷರುಗಳಾದ ಶ್ರೀಪತಿ ಬಡಕೋಡಿ, ಮಿತ್ತೊಟ್ಟುಗುತ್ತು ಸುಧಾಕರ ಶೆಟ್ಟಿ, ಕಾಯ೯ದಶಿ೯ ಸುನಿಲ್ ಕುಮಾರ್ ಶೆಟ್ಟಿ ಮಾರೂರು, ಕೋಶಾಧ್ಯಕ್ಷ ಶಂಕರ ಎ. ಕೋಟ್ಯಾನ್, ಜೀಣೋ೯ದ್ಧಾರ ಸಮಿತಿಯ ಪ್ರ. ಕಾಯ೯ದಶಿ೯ ರಾಮದಾಸ ಅಸ್ರಣ್ಣ, ಸ್ವಾಗತ ಸಮಿತಿಯ ಅಧ್ಯಕ್ಷ ರಮೇಶ್ ಎಸ್. ಶೆಟ್ಟಿ, ಸೇರಿದಂತೆ ಸಮಿತಿ ಸದಸ್ಯರು ಇದ್ದರು.


