ಗುಜರಾತ್ನಲ್ಲಿ ಸಾಂಪ್ರದಾಯಿಕವಾಗಿ ಕದಿರೆ ಕಟ್ಟಿ ಪ್ರಕೃತಿಮಾತೆಗೆ ಸ್ಮರಿಸಿದ ದಯಾನಂದ ಬೊಂಟ್ರ

ಮುಂಬಯಿ (ಆರ್ಬಿಐ), ಸೆ. 28: ಗುಜರಾತ್ ಬಿಲ್ಲವರ ಸಂಘವು ಇಂದಿಲ್ಲಿ ಆದಿತ್ಯವಾರ ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಸಿದ್ಧಿವಿನಾಯಕ ಕಾಂಪ್ಲೆಕ್ಸ್ನಲ್ಲಿನ ಸಂಘದ ಶ್ರೀ ಬೈದ್ಯಶ್ರೀ ಸಾಂಸ್ಕೃತಿಕ ಸಭಾ ಭವನದಲ್ಲಿ ತುಳುವರ ವೈಶಿಷ್ಟ ಮಯ ಸಾಂಪ್ರದಾಯಿಕ ತೆನೆ (ಕದಿರು) ಹಬ್ಬವನ್ನು (ಕುರಲ್ ಪರ್ಬ-ಪುದ್ದಾರ್) ಪೂಜಾಧಿಗಳೊಂದಿಗೆ ಧಾರ್ಮಿಕದತ್ತವಾಗಿ ನೆರವೇರಿಸಿತು.

ಸಂಘದ ಗೌರವಾಧ್ಯಕ್ಷ ದಯಾನಂದ ಬೊಂಟ್ರ (ಬೆಳ್ಮಣ್ಣು) ಬರೋಡಾ ಇವರ ದಕ್ಷ ಮಾರ್ಗದರ್ಶನ ಹಾಗೂ ಜಿಬಿಎಸ್ ಅಧ್ಯಕ್ಷ ಹರೀಶ್ ವಿ.ಪೂಜಾರಿ ಮಡ್ಯಾರ್ (ದೇರಳಕಟ್ಟೆ) ಮುಂದಾಳುತ್ವದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಸರಿತಾ ಸೋಮನಾಥ್ ಪೂಜಾರಿ ಸಾರಥ್ಯದಲ್ಲಿ ಅರಿಶಿನ ಕುಂಕುಮ ಕಾರ್ಯಕ್ರಮ ನೆರವೇರಿತು.

ಸಂಪ್ರದಾಯಬದ್ಧ ಉಡುಗೆ ಧರಿಸಿ ತುಳುನಾಡ ಹಬ್ಬದ ವಾತಾವರಣ ಸೃಷ್ಟಿಸಿದ ಸದಸ್ಯರನ್ನೊಳಗೊಂಡು ಪದಾಧಿಕಾರಿಗಳು ಸಂಘದ ಮಂದಿರದಲ್ಲಿನ ಮಾತೆ ಗಾಯತ್ರಿದೇವಿ, ಕೋಟಿ-ಚೆನ್ನಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುವಿಗೆ ಆರಂಭದಲ್ಲಿ ಪೂಜೆ ನೆರವೇರಿಸಿದರು. ಅಧ್ಯಕ್ಷ ಹರೀಶ್ ವಿ.ಪೂಜಾರಿ ತೆನೆಯನ್ನು (ಕದಿರು) ಹೊತ್ತು ಚಾವಡಿಗೆ ಪ್ರವೇಶಿಸಿದ್ದು ಸದಸ್ಯರು ಮತ್ತು ಮಹಿಳೆಯರು ಪರಂಪರಿಕವಾಗಿ ಹೊಸಬೆಳೆ (ತೆನೆ) ಬರಮಾಡಿ ಕೊಂಡರು. ಶೃಂಗರಿತ ದೇವರ ಮಂಟದ ಮುಂದಿರಿಸಿದ ತೆನೆ, ಕಾಯಿಪಲ್ಯ, ಫಲಪುಷ್ಪಗಳಿಗೆ ದಯಾನಂದ ಬೊಂಟ್ರ ಅವರು ಸೀಯಾಳ, ಹಾಲಿನ ಅಭಿಷೇಕಗೈದು ಪ್ರಾರ್ಥನೆ ನೆರವೇರಿಸಿ ಸಾಂಪ್ರದಾಯಿಕವಾಗಿ ಕದಿರೆ ಕಟ್ಟಿ, ಪ್ರಕೃತಿಮಾತೆಯನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಜಿಬಿಎಸ್ ಮುಖ್ಯ ಸಂಯೋಜಕ ವಾಸು ವಿ.ಸುವರ್ಣ, ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಲಿಯನ್, ಖಜಾಂಚಿ ಸುದೇಶ್ ಕೋಟಿಯನ್, ಜೊತೆ ಕಾರ್ಯದರ್ಶಿ ರವಿ ಸಾಲಿಯನ್, ಜೊತೆ ಕೋಶಾಧಿಕಾರಿ ಜ್ಯೋತಿ ಎಸ್.ಕೋಟ್ಯಾನ್ ಪ್ರಧಾನವಾಗಿ ಉಪಸ್ಥಿತರಿದ್ದರು. ಅಂತೆಯೇ ಜಿಬಿಎಸ್ ಸೂರತ್ ಶಾಖೆಯ ಕಾರ್ಯಾಧ್ಯಕ್ಷ ಪ್ರಭಾಕರ್ ಎಸ್.ಪೂಜಾರಿ, ಉಪಾಧ್ಯಕ್ಷೆ ಕುಸುಮ್ ಗೋಪಾಲ್ ಪೂಜಾರಿ, ಶೋಭಾ ಹರೀಶ್ ಪೂಜಾರಿ, ಮಾ| ಮಾನ್ವಿತ್ ಹೆಚ್.ಪೂಜಾರಿ, ಮಾ| ವರ್ಣಿತ್ ಹೆಚ್.ಪೂಜಾರಿ ಸೇರಿದಂತೆ ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರನೇಕರು ಉಪಸ್ಥಿತರಿದ್ದರು.

ಪೂಜೆಯ ನಂತರ ಶುದ್ಧೀಕರಿಸಿದ ವರುಷದ ಪ್ರಥಮ ಫಸಲು ಭತ್ತದ ಹೊಸತೆನೆಯಾದ ಸುಲಿದ ಹೊಸ ಭತ್ತದ ಅಕ್ಕಿಯೊಂದಿಗೆ ಸಾಂಪ್ರದಾಯಿಕವಾಗಿ ಸಿದ್ಧಪಡಿಸಿದ ಶುದ್ಧ ಶಾಖಾಹಾರಿ (ಹೊಸಅಕ್ಕಿ ಊಟ, ಪಾಯಸ, ಬಗೆಬಗೆಯ ಪಲ್ಯಗಳ) ಹೊಸ ಭೋಜನ (ಪೊಸ ವೊಣಸ್) ಸವಿದು ತೆನೆಹಬ್ಬ ಆಚರಿಸಿದರು. ಕೊನೆಯಲ್ಲಿ ಗರ್ಬಾ, ದಾಂಡಿಯಾ ನಡೆಸಿ ತೆನೆಹಬ್ಬ ಸಂಭ್ರಮಿಸಿ ವಾರ್ಷಿಕ ದಸರಾ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಜಿಬಿಎಸ್ ಬರೋಡ ಶಾಖೆಯ ಮಹಿಳಾ ಘಟಕದ ಕಾರ್ಯಧ್ಯಕ್ಷೆ ಯಶೋದಾ ನಾಗೇಶ್ ಪೂಜಾರಿ, ಕಾರ್ಯದರ್ಶಿ ಯಶೋದಾ ರವಿ ಸಾಲಿಯನ್, ಖಜಾಂಚಿ ಆಗಿ ರೇವತಿ ರೋಹಿದಾಸ್ ಪೂಜಾರಿ ಇವರನ್ನು ಆಯ್ಕೆ ಮಾಡಲಾಯಿತು.



