ಮಂಗಳೂರು: ಮಂಗಳೂರಿನ ಹೆಸರಾಂತ ಧಾರ್ಮಿಕ, ಸಾಮಾಜಿಕ ನೇತಾರ, ಕೊಡುಗೈ ದಾನಿ, ಸುನ್ನತ್ ಜಮಾಅತಿನ ಅಗ್ರಗಣ್ಯ ಹರಿಕಾರ.. ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅತಿವಿಶಿಷ್ಠರಾಗಿದ್ದ ಇಬ್ರಾಹೀಮ್ ಬಾವ ಹಾಜಿಯವರು ಐದು ವರ್ಷಗಳ ಹಿಂದೆ ಇದೇ ದಿನ (ರಮಳಾನ್ 28) ವಫಾತ್ ಆಗಿದ್ದರು.

ಮಂಗಳೂರು, ಬಂದರ್ ಬಂಬೂ ಬಝಾರ್ ನಲ್ಲಿ ಅವರ ಡ್ರೈ ಫಿಶ್ ಮರ್ಚೆಂಟ್ ವ್ಯಾಪಾರ ಮಳಿಗೆ ಕೇವಲ ವ್ಯಾಪಾರ ಕೇಂದ್ರ ಮಾತ್ರವಾಗಿರಲಿಲ್ಲ. ಅದೊಂದು ಧಾರ್ಮಿಕ ಕೇಂದ್ರವೂ ಸಾವಿರಾರು ಮಂದಿಗೆ ದಾನದ ತಾಣವೂ ಜ್ಞಾನದ ತಾಣವೂ ಆಗಿತ್ತು. ಅವರ ವ್ಯಾಪಾರದಲ್ಲಿ ಉತ್ತಮ ಆದಾಯವಿತ್ತು. ಆದರೆ ಆ ಆದಾಯದ ಬಹುಪಾಲನ್ನು ಅವರು ಧಾರ್ಮಿಕ, ಸಾಮಾಜಿಕ ಹಾಗೂ ಸಂತ್ರಸ್ತರ ನೆರವಿಗಾಗಿ ವ್ಯಯಿಸುತ್ತಿದ್ದರು.
ಸುನ್ನತ್ ಜಮಾಅತಿನಲ್ಲಿ ಅಚಲ ವಿಶ್ಚಾಸಿಯಾಗಿದ್ದ ಅವರು ಸುನ್ನಿ ಪತ್ರಿಕೆಗಳಿಗೂ ಸುನ್ನಿ ಕಾರ್ಯಕ್ರಮಗಳಿಗೂ ಸುನ್ನಿ ಭಾಷಣಕಾರ, ಲೇಖಕ, ಕಾರ್ಯಕರ್ತರಿಗೂ ಆರ್ಥಿಕ ನೆರವು ಹಾಗೂ ಸ್ಪೂರ್ತಿ ತುಂಬುತ್ತಿದ್ದ ನಾಯಕರಾಗಿದ್ದರು. ಉಮರಾಗಳು ಆಲಿಮರಾಗಿರುವುದು ಅಪರೂಪ. ಆದರೆ ಬಾವ ಹಾಜಿಯವರು ಉಮರಾ ನಾಯಕರಾಗಿದ್ದಂತೆಯೇ ಓರ್ವ ಉತ್ತಮ ಆಲಿಮ್ ಕೂಡಾ ಆಗಿದ್ದರು. ಅವರು ಯಾವುದಾದರೂ ಅರಬಿಕ್ ಕಾಲೇಜಿನಿಂದ ಬಿರುದು ಪಡೆದವರಾಗಿರಲಿಲ್ಲ, ಆಲಿಮ್ ಆಗಿ ಗುರುತಿಸಲ್ಲಡುತ್ತಿಲೂ ಇದ್ದಿರಲಿಲ್ಲ. ಆದರೆ ಅರೆಬಿಕ್ ಭಾಷೆ, ಖುರ್‌ಆನ್, ಹದೀಸ್, ಫಿಕ್ಹ್ ಜ್ಞಾನಗಳ ವಿಷಯಗಳಲ್ಲಿ ಸಾಮಾನ್ಯ ಆಲಿಮರಿಗೆ ಸಮಾನವಾದ ಜ್ಞಾನದ ಕೊಡವಾಗಿದ್ದರು. ಅದರ ಜೊತೆಗೆ ಉರ್ದು, ಇಂಗ್ಲಿಷ್ ಭಾಷೆಗಳಲ್ಲಿ ಲೀಲಾಜಾಲವಾಗಿ ಮಾತಾಡಬಲ್ಲವರಾಗಿದ್ದರು.
ತಕ್ವಾ ( ಭಯಭಕ್ತಿ) ಕೈಬಿಡದೆ ಅಲ್ಲಾಹನಲ್ಲಿ ಅಪಾರವಾದ ಭಯಭಕ್ತಿಯೊಂದಿಗೆ ಆರಾಧನಾ ಕಾರ್ಯಗಳಲ್ಲೂ ಬಹಳ ಶ್ರದ್ಧಾಳುವಾಗಿದ್ದ ಅವರು ತನ್ನ ವೈಯಕ್ತಿಕ ಬದುಕಿನಲ್ಲಿ ಮಾದರೀ ಯೋಗ್ಯರಾಗಿದ್ದರು. ಅವರ ವ್ಯಾಪಾರ ಕೇಂದ್ರದ ಕಾರ್ಮಿಕರನ್ನು ಕೆಲಸಗಾರರಾಗಿ ಕಾಣದೆ ಮನೆಯ ಸದಸ್ಯರಂತೆ ಕಂಡು ಎಲ್ಲಾ ವಿಧ ಕಷ್ಟ- ಸುಖಗಳಿಗೆ ಸ್ಪಂದಿಸುತ್ತಿದ್ದ ಅವರ ಸಹೃದತೆಯನ್ನು ಅವರ ಕೆಲಸಗಾರರಾಗಿದ್ದ ಅನೇಕರು ಈಗಲೂ ಭಾವುಕತೆಯಿಂದ ನೆನೆಸುತ್ತಿದ್ದಾರೆ.
ಮರ್ಹೂಮ್ ಇಬ್ರಾಹೀಮ್ ಬಾವ ಹಾಜಿಯವರ ವಿಷಯಗಳನ್ನು ಇಂತಹ ಒಂದು ಬರಹದಲ್ಲಿ ಮುಗಿಸಲು ಸಾಧ್ಯವಿಲ್ಲ. ಅದಕ್ಕೆ ಒಂದು ಬೃಹತ್ ಗ್ರಂಥವೇ ಬೇಕಾಗಬಹುದು. ಮಂಗಳೂರಿನ ಐತಿಹಾಸಿಕ ಕೇಂದ್ರ ಜುಮಾ ಮಸ್ಜಿದ್ ಕಬರಸ್ತಾನದಲ್ಲಿ ಅವರ ಧರ್ಮಪತ್ನಿಯ ಕಬರ್ ಪಕ್ಕದಲ್ಲೆ ಅವರ ಕಬರ್ ಇದೆ. ಸಾಮಾನ್ಯವಾಗಿ ನಾನು ಮಂಗಳೂರಿಗೆ ಹೋದಾಗ ಅಲ್ಲಿ ಹೋಗಿ ಝಿಯಾರತ್ ಮಾಡುವುದಿದೆ.
ಇಂದು ಮಂಗಳೂರು, ಜೆಪ್ಪು ಮಾರ್ನಮಿಕಟ್ಟೆಯಲ್ಲಿರುವ ಅಸ್ಸುಫ್ಫಾ ಸ್ಥಾಪನೆಯಲ್ಲಿ ಮರ್ಹೂಮ್ ಬಾವ ಹಾಜಿಯವರ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ. ಪ್ರಸ್ತುತ ಸ್ಥಾಪನೆಯ ರೂವಾರಿ ಅಮೀನ್ ಹಸನ್ ಹಾಜಿಯವರು ಬಾವ ಹಾಜಿಯವರ ಬಾವ ಮರ್ಹೂಮ್ ಉಞ್ಞಿಹಾಜಿಯವರ ಸುಪುತ್ರ. ಇವರು ಕೂಡಾ ಬಾವ ಹಾಜಿಯವರ ಹಾದಿಯಲ್ಲಿಯೇ ಧಾರ್ಮಿಕ, ಸಾಮಾಜಿಕ ಸೇವೆಯಲ್ಲಿ ಮುನ್ನಡೆಯುತ್ತಿದ್ದಾರೆ. ಅಲ್ಲಾಹು ಆಫಿಯತುಳ್ಳ ದೀರ್ಘಾಯುಷ್ಯ ಕರುಣಿಸಲಿ ಆಮೀನ್.
ಇಂದು ಸಂಜೆ ಪ್ರಸ್ತುತ ಸ್ಥಾಪನೆಯಲ್ಲಿ ಮರ್ಹೂಮ್ ಬಾವ ಹಾಜಿಯವರಿಗೆ ಖತ್ಮುಲ್ ಖುರ್‌ಆನ್ ಹದ್ಯಾ ಕಾರ್ಯಕರ್ಮ, ಇಫ್ತಾರ್ ಹಾಗೂ ಇನ್ನಿತರ ಅನುಸ್ಮರಣಾ ಕಾರ್ಯಕ್ರಮಗಳು ಜರುಗಲಿದೆ. ಅಲ್ಲಾಹು ಸ್ವೀಕರಿಸಲಿ. ಮರ್ಹೂಮ್ ಬಾವ ಹಾಜಿ ಹಾಗೂ ಪತ್ನಿಯವರ ಕಬರ್ ಗಳನ್ನು ಸ್ವರ್ಗಧಾಮಗೊಳಿಸಲಿ. ನಮ್ಮೆಲ್ಲರನ್ನು ಸ್ವರ್ಗದಲ್ಲಿ ಒಟ್ಟು ಸೇರಿಸಲಿ. ಬೃಹತ್ ಉದ್ದಿಮೆ, ವ್ಯವಹಾರಗಳ ನಡುವೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ಸೇವಾನಿರತರಾಗಿರುವ ಅಮೀನ್ ಹಸನ್ ಹಾಜಿಯವರ ಎಲ್ಲಾ ಸುಕೃತಗಳನ್ನು ಅಲ್ಲಾಹು ಸ್ವೀಕರಿಸಲಿ.
ಮರ್ಹೂಮ್ ಇಬ್ರಾಹೀಮ್ ಬಾವ ಹಾಜಿಯವರ ಇಂದಿನ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಒಂದು ವೇಳೆ ಭಾಗವಹಿಸಲು ಅಸಾಧ್ಯವಾದರೆ ಅವರ ಹೆಸರಲ್ಲಿ ಫಾತಿಹಾ, ಯಾಸೀನ್ ಹದ್ಯಾ ಮತ್ತು ಸದಖಾ, ದುಆಗಳನ್ನು ನಡೆಸಬೇಕು ಎಂದು ಅವರ ಎಲ್ಲಾ ಅಭಿಮಾನಿಗಳಲ್ಲಿ ಬೇಡಿಕೊಳ್ಳುತ್ತಿದ್ದೇನೆ.


