ಬಂಟ್ವಾಳ: ಬಂಟ್ವಾಳ ಪುರಸಭೆಯಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಮುಖ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಕೆಲವು ರಾಜಕೀಯ ಮುಖಂಡರ ಭ್ರಷ್ಟಾಚಾರದ ಹಿನ್ನೆಲೆ, ಟೆಂಡರ್ ಅವಧಿ ಮುಗಿದಿದ್ದರೂ ನಿಯಮವಿರುದ್ಧವಾಗಿ ಕಚೇರಿಯಲ್ಲಿ ಮುಂದುವರಿದಿದ್ದ ನೌಕರರ ಸಂಬಳಕ್ಕೆ ಕಡಿವಾಣ ಹಾಕಿ ಹೊಸ ನೌಕರರ ನೇಮಕಾತಿಗೆ ನೂತನ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಈ ಕ್ರಮದಿಂದ ಅಸಮಾಧಾನಗೊಂಡ ವಾಲ್ಮ್ಯಾನ್ಗಳು ನೀರು ಸರಬರಾಜು ನಿಲ್ಲಿಸಿರುವುದರಿಂದ ಪುರಸಭಾ ವ್ಯಾಪ್ತಿಯಾದ್ಯಂತ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಾಲೂಕು ಆಸ್ಪತ್ರೆಯಲ್ಲೂ ನೀರಿನ ಅಭಾವ ಉಂಟಾಗಿ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರ ಹಿಂದೆ ಕಾಣದ ಕೈಗಳ ಷಡ್ಯಂತ್ರದ ಪರಿಣಾಮವಾಗಿ ನೌಕರರು ನೀರು ಬಿಡದಿರುವ ಸಾಧ್ಯತೆ ಇದೆ ಎಂದು ಎಸ್ಡಿಪಿಐ ಮನಗಂಡಿದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸಾರ್ವಜನಿಕರಿಗೆ ಉಂಟಾಗಿರುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಎಸ್ಡಿಪಿಐ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ಸಮಸ್ಯೆಯನ್ನು ತಕ್ಷಣ ಬಗೆಹರಿಸಲಾಗದಿದ್ದರೆ ಸಾರ್ವಜನಿಕರನ್ನು ಸಂಘಟಿಸಿ ಪುರಸಭೆಗೆ ಮುತ್ತಿಗೆ ಹಾಕುವ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.


