ಬಹರೈನ್: ಮಂಗಳೂರಿನಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ತುಳು ಭಾಷೆಗೆ ಹೆಚ್ಚುವರಿ ರಾಜ್ಯ ಭಾಷೆಯ ಸ್ಥಾನಮಾನ ದೊರೆತಿರುವ ಬಗ್ಗೆ ಬಹರೈನ್ ನಲ್ಲಿ ಸಂಭ್ರಮಾಚರಣೆ ಜರಗಿತು. ಬಹರೈನ್ ನ ಪಾಪ್ಪಿಲ್ಲಾನ್ ಸಭಾಂಗಣದಲ್ಲಿ ತುಳುವರು ಬೆರೆತು ತಮ್ಮ ಸಂತೋಷವನ್ನು ಹಂಚಿಕೊಂಡರು.

ಬಹರೈನ್ ತುಳು ಕೂಟದ ಮುಖ್ಯ ಸಂಘಟಕರಾದ ಹಾಗೂ ಬಹರೈನ್ ಅನಿವಾಸಿ ಕನ್ನಡಿಗ ವೇದಿಕೆಯ ಅಧ್ಯಕ್ಷರಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ರಾಜ್ ಕುಮಾರ್ ರವರು ಮಾತನಾಡಿ ವಿಶ್ವದಾದ್ಯಂತ ಹಂಚಿ ಹೋಗಿರುವ ತುಳುವರು ಇಂದು ಸಂಭ್ರಮ ಪಡುವ ದಿನ. ಕರ್ನಾಟಕ ಸರಕಾರ ಹಾಗೂ ಮುಖ್ಯ ಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ರವರಿಗೆ ನಾನು ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಇತ್ತೀಚೆಗಷ್ಟೇ ಸಚಿವ ಶ್ರೀ ಶಿವರಾಜ್ ತಂಗಡಗಿ ಮತ್ತು ಶಾಸಕ ಶ್ರೀ ಅಶೋಕ ರೈ ಯವರು ಬಹರೈನ್ ಗೆ ಬಂದಿದ್ದಾಗ ಬಹರೈನ್ ನ ತುಳುವರು ಈ ಬಗ್ಗೆ ಒತ್ತಾಯಿಸಿದ್ದರು. ಕೊನೆಗೂ ನಮ್ಮ ಕನಸು ನನಸಾಗಿದೆ ಎಂದು ವಿವರಿಸಿದರು.

ಬಹರೈನ್ ದೇಶದಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಮಿಕ್ಕಿ ತುಳುವರಿದ್ದು ರಾಜ್ಯ ಭಾಷೆಯ ಸ್ಥಾನಮಾನ ಎಲ್ಲರಿಗೂ ಖುಷಿ ತಂದಿದೆ. ಕೊಲ್ಲಿ ದೇಶಗಳಲ್ಲೇ ಅತ್ಯಂತ ಹೆಚ್ಚು ತುಳು ಚಟುವಟಿಕೆಗಳು ಬಹರೈನ್ ನಲ್ಲಿ ಕಳೆದ ಐವತ್ತು ವರುಷಗಳಿಂದ ಜರಗುತ್ತಿವೆ.



