ಉಳ್ಳಾಲ: ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಹಾಗೂ ಬ್ಲೂಲೈನ್ ಫುಡ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಅರೇಬಿಯನ್ ಸೀ ಫಿಶರೀಸ್ ಮ್ಯಾನೇಜ್‌ಮೆಂಟ್ ಕೋಆರ್ಡಿನೇಷನ್ ಕಮಿಟಿ ಸಹಯೋಗದಲ್ಲಿ ‘ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ-2026’ ಪ್ರಯುಕ್ತ ಉಳ್ಳಾಲ ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.

ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಎಚ್.ಎನ್ ಆಂಜನೇಯಪ್ಪ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ-2026’ ಪ್ರಯುಕ್ತ ಉಳ್ಳಾಲ ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಫ್ಲ್ಯಾಗ್ ಆಫ್ ಮಾಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕರಾವಳಿ ಮತ್ತು ಸಮುದ್ರ ಪರಿಸರದ ಸಂರಕ್ಷಣೆಗೆ ನಿರಂತರ ಪ್ರಯತ್ನ ಅಗತ್ಯವಿದೆ. ಕಡಲತೀರವನ್ನು ಸ್ವಚ್ಛವಾಗಿಡುವುದರ ಜೊತೆಗೆ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ ವಿಲೇವಾರಿ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಭಿಯಾನದ ಅಂಗವಾಗಿ ಉಳ್ಳಾಲ ಕಡಲತೀರದ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ತ್ಯಾಜ್ಯವನ್ನು ಸಂಗ್ರಹಿಸಿ ವಿಂಗಡಿಸಲಾಯಿತು.

ಬ್ಲೂಲೈನ್ ಫುಡ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಶೌಕತ್ ಶೌರಿ ಮಾತನಾಡಿ, ಕಡಲತೀರ ಹಾಗೂ ಸಮುದ್ರ ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕರಾವಳಿ ಪ್ರದೇಶದಲ್ಲಿ ತ್ಯಾಜ್ಯ ಸಂಗ್ರಹವಾಗುವುದರಿಂದ ಸಮುದ್ರ ಜೀವಿಗಳು ಹಾಗೂ ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಸಾರ್ವಜನಿಕರು ಸ್ವಚ್ಛತಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಮೀನುಗಾರಿಕಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ಅಂಕಿಅಂಶ ಮತ್ತು ವಿಸ್ತರಣಾ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ಮಗದಾ ಮಾತನಾಡಿ, ಕರಾವಳಿ ಪರಿಸರದ ಸಂರಕ್ಷಣೆ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರ ಪಾತ್ರ ಮಹತ್ವದ್ದಾಗಿದೆ. ಇಂತಹ ಸ್ವಚ್ಛತಾ ಅಭಿಯಾನಗಳ ಮೂಲಕ ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್ ಕಲ್ಲೇರ್, ಕೆವಿಎಎಫ್‌ಎಸ್‌ಯು ವಿಸ್ತರಣಾ ನಿರ್ದೇಶಕ ಡಾ. ಎಸ್.ಆರ್. ಸೋಮಶೇಖರ್, ಬ್ಲೂಲೈನ್ ಫುಡ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ನಿರ್ದೇಶಕ ಮಹಮ್ಮದ್ ಫಕೀರ್ ಹುಸೈನ್, ಉಳ್ಳಾಲ ನಗರ ಸಭೆ ಸದಸ್ಯ ಜಬ್ಬಾರ್, ಉಳ್ಳಾಲ ಮೊಗವೀರ ಸಂಘ ಅಧ್ಯಕ್ಷ ಯಶವಂತ್ ಅಮೀನ್ ಉಪಸ್ಥಿತರಿದ್ದರು.


