ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್ ನಲ್ಲಿ ಕೆನರಾ ಎಂಜಿನಿಯರಿಂಗ್ ಕಾಲೇಜು, ಬೆಂಜನಪದವು ಸಹಯೋಗದೊಂದಿಗೆ “ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ” ನಡೆಯಿತು.
ಕಾರ್ಯಕ್ರಮವನ್ನು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶ್ರೀ ಶ್ರೀರಾಮ ಸಮರ್ಥ ಜೆ. ಅವರು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಸುತ್ತಮುತ್ತಲಿನ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ನವೀನ ಪರಿಹಾರಗಳನ್ನು ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ವೈಜ್ಞಾನಿಕ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಬೆಳೆಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ದಯಾನಂದ .ಜಿ.ಕೆ ಹಾಗೂ ಗ್ರೀನ್ ವೀವ್ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಟಿಪ್ಪೋಜಿ ಎಂ.ವೈ. ಉಪಸ್ಥಿತರಿದ್ದರು.
ಕೆನರಾ ಎಂಜಿನಿಯರಿಂಗ್ ಕಾಲೇಜಿನಿಂದ ಆಗಮಿಸಿದ 14 ವಿದ್ಯಾರ್ಥಿಗಳು ಮತ್ತು ಇಬ್ಬರು ಅಧ್ಯಾಪಕರ ಮಾರ್ಗದರ್ಶನದಲ್ಲಿ ಗ್ರೀನ್ ವೀವ್ ಪ್ರೌಢ ಶಾಲೆಯ 45 ವಿದ್ಯಾರ್ಥಿಗಳಿಗೆ ನವೋದ್ಯಮ, ತಂತ್ರಜ್ಞಾನ ಹಾಗೂ ಉದ್ಯಮಶೀಲತೆಯ ಕುರಿತು ನವೀನ ಮಾದರಿ ತಯಾರಿಕೆಯ ತರಬೇತಿ ಮತ್ತು ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆಗಳನ್ನು ಬೆಳೆಸುವ ಜೊತೆಗೆ ತಂತ್ರಜ್ಞಾನವನ್ನು ಸಮಾಜಮುಖಿ ಸಮಸ್ಯೆಗಳ ಪರಿಹಾರಕ್ಕೆ ಬಳಸುವ ಪ್ರೇರಣೆಯನ್ನು ನೀಡಿತು.
ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ರಶ್ಮಿ ನೆರವೇರಿಸಿದರು. ಮುಖ್ಯಶಿಕ್ಷಕಿ ನಮಿತಾ ಬಿ.ಎನ್. ಸ್ವಾಗತಿಸಿದರು. ಅಟಲ್ ಟಿಂಕರಿಂಗ್ ಲ್ಯಾಬ್ ನೋಡಲ್ ಶಿಕ್ಷಕ ಇಬ್ರಾಹಿಂ ಖಲೀಲ್ ವಂದನಾರ್ಪಣೆ ಸಲ್ಲಿಸಿದರು.


