ಮಂಗಳೂರು ನಗರದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟದ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಈಗ ಗಮನಾರ್ಹ ಫಲ ದೊರಕುತ್ತಿರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾದಕ ಚಟುವಟಿಕೆಗಳಲ್ಲಿ ಸಣ್ಣ ಮಟ್ಟಿನ ಕಡಿತ ಕಂಡುಬಂದಿದ್ದು, ಇದು ಸಮೂಹ ಪ್ರಯತ್ನಗಳ ಪರಿಣಾಮವಾಗಿದೆ.

ಮಂಗಳೂರು ನಗರದಲ್ಲೇ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟದ ವಿರುದ್ಧ ನಡೆಯುತ್ತಿರುವ ಕ್ರಮಗಳು ನಿರಂತರವಾಗಿ ಬಲ ಪಡೆಯುತ್ತಿವೆ. ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳು ಮತ್ತು ಸಮಾಜದ ಸಹಭಾಗಿತ್ವದಿಂದ ಈ ನಿಯಂತ್ರಣ ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಅಲ್ ಸಲಾಮ ಖಿದ್ಮಾ ಫೌಂಡೇಶನ್ ಕಾರ್ಯಾಧ್ಯಕ್ಷರಾದ ಶರೀಫ್ ಹಾಜಿ ವೈಟ್‌ಸ್ಟೋನ್ ಮಾತನಾಡಿ, ಈ ಸಾಧನೆಗೆ ಪೊಲೀಸ್ ಇಲಾಖೆಯ ಸೇವೆ ಶ್ಲಾಘನೀಯ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಹಾಗೂ ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ನಿರಂತರ ಪ್ರಯತ್ನಗಳಿಂದ ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ನಿಯಂತ್ರಣದಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಲವು ವರ್ಷಗಳಿಂದ ತಮ್ಮ ಸಂಸ್ಥೆ ಹಾಗೂ ಇತರ ಸಂಘಟನೆಗಳು ಜಾಗೃತಿ ಕಾರ್ಯಕ್ರಮಗಳು, ಕೌನ್ಸೆಲಿಂಗ್ ಶಿಬಿರಗಳು ಮತ್ತು ಸಮುದಾಯ ಆಧಾರಿತ ಕಾರ್ಯಗಳನ್ನು ನಡೆಸುತ್ತಿದ್ದು, ಈ ಎಲ್ಲಾ ಪ್ರಯತ್ನಗಳಿಗೆ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಸಹಕಾರ ದೊರಕಿದೆ ಎಂದರು.
“ನಾವು ನಡೆಸಿದ ಅಧ್ಯಯನ ಮತ್ತು ಸಮೀಕ್ಷೆಗಳ ಪ್ರಕಾರ, ಮಂಗಳೂರು ನಗರದಲ್ಲಿ ಮಾದಕ ವಸ್ತುಗಳ ಬಳಕೆ ಸಣ್ಣ ಮಟ್ಟಿಗೆ ಇಳಿಕೆಯಾಗಿದೆ. ಇದು ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದಿಂದ ಸಾಧ್ಯವಾಗಿದೆ,” ಎಂದು ಶರೀಫ್ ಹಾಜಿ ವೈಟ್‌ಸ್ಟೋನ್ ಹೇಳಿದರು.
ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣವಾಗಿ ಡ್ರಗ್ಸ್ ಮುಕ್ತವಾಗಿಸಲು ಇನ್ನಷ್ಟು ಆಂದೋಲನಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಹೋರಾಟವನ್ನು ಸಂಪೂರ್ಣ ಯಶಸ್ಸಿನವರೆಗೆ ಮುಂದುವರಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


