ಸಮ್ಮೇಳನಗಳು ಸಂಬಂಧ ಬೆಸೆಯುವ ಕೊಂಡಿಗಳಾಗಿವೆ : ಲೆ| ಜ| ಡಾ| ಡೆವಿಡ್ ಫ್ರಾಂಕ್ ಫೆರ್ನಾಂಡಿಸ್
(ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.09: ಹಸಿದ ಮನುಷ್ಯನಿಗೆ ತತ್ವಶಾಸ್ತ್ರವನ್ನು ಕಲಿಸಲು ಸಾಧ್ಯವಿಲ್ಲ. ನಾವು ಎಲ್ಲೂ ಹುಟ್ಟಿ, ಎಲ್ಲೂ ಬೆಳೆದು, ಅಪರಿಚಿತರಾಗಿ ನಮ್ಮ ಜೀವನದಲ್ಲಿ ಜೊತೆ ಸೇರಿ ಶಾಶ್ವತವಾಗಿ ಕೊನೆಯವರೆಗೂ ಇರುವ ಸುಂದರವಾದ ಸಂಬಂಧವೇ ಸ್ನೇಹ, ಗೆಳೆತನ, ಮಿತ್ರತ್ವ. ಮಂಜುನಾಥ ಸಾಗರ್ ಅವರು ಇಂತಹ ಸಂಬಂಧಗಳ ಕೊಂಡಿಯಾಗಿದ್ದಾರೆ. ಗೆಳೆಯರು ನಮ್ಮಜೀವನದಲ್ಲಿ ಬಹಳ ಮುಖ್ಯ. ಗೆಳೆಯರು ನಮ್ಮ ಜೀವನದ ಅವಿಭಾಜಿತ ಅಂಗ ಅನ್ನುವುದನ್ನು ಮಹಾಭಾರತದಲ್ಲಿ ಕೂಡಾ ಉಲ್ಲೇಖಿಸಲಾಗಿದೆ. ಗೆಳೆಯರು ಇಲ್ಲದಿದ್ದರೆ ಏಕಾಂಗಿಯಾಗಿ ಬಿಡುತ್ತಾರೆ. ಮಹಾಭಾರತದ ಕೌರವ ಮತ್ತು ಕರ್ಣನ ಮಧ್ಯೆ ಏರ್ಪಟಂತಹ ಸ್ನೇಹ. ಹೆತ್ತ ತಾಯಿ, ಹುಟ್ಟಿದ ಸ್ವದೇಶ ಸ್ವರ್ಗದಂತೆ. ಅದೇ ರೀತಿ ನಾನು ೫೯ ವರ್ಷ ಕರುನಾಡು ಕರ್ನಾಟಕವನ್ನು ಬಿಟ್ಟು ಹೊಟ್ಟೆಪಾಡಿಗೆ ಪರದೇಶಕ್ಕೆ ಸೇರಿದರೂ ಇಂದಿಗೂ, ನನಗೂ ನನ್ನ ಹೆತ್ತ ತಾಯಿ ತವರೂರು ಮುಖ್ಯ. ಮನುಷ್ಯನ ಜೀವನ ಹುಟ್ಟು ಸಾವಿನ ನಡುವೆ ಮಾತ್ರ, ಕಣ್ಣ ರೆಪ್ಪೆ ತೆರೆದರೆ ಜನನ. ಶಾಶ್ವತ ಮುಚ್ಚಿದರೆ ಮರಣ. ಈ ಜೀವನ ಇಂತಹ ಸಮ್ಮೇಳನಗಳ ಮೂಲಕವಾದರೂ ಸಂತೋಷಕರವಾಗಿ ಸಾರ್ಥಕವಾಗಲಿ ಎಂದು ಅನಿವಾಸಿ ಕನ್ನಡಿಗ, ಮೊಸಕೋ ಶಿಪ್ಪಿಂಗ್ ಆಂಡ್ ಫಾರ್ವಡಿಂಗ್ ಎಲ್‌ಎಲ್‌ಸಿ (ದುಬಾಯಿ) ಇದರ ಆಡಳಿತ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಎಂಬ್ಯಾಸಡರ್ ಡಾ| ಡೆವಿಡ್ ಫ್ರಾಂಕ್ ಫೆರ್ನಾಂಡಿಸ್ ನುಡಿದರು.
ಇಂದಿಲ್ಲಿ ಗುರುವಾರ ಮಂಗಳೂರುನ ಕುದ್ಮುಲ್ ರಂಗರಾವ್ ಪುರಭವನದ ಶಾರ್ಜಾ ಕರ್ನಾಟಕ ಸಂಘ ಇದರ ಮಾಜಿ ಅಧ್ಯಕ್ಷ ದಿ| ಪ್ರಭಾಕರ ಅಂಬಲತೆರೆ (ಶಾರ್ಜಾ) ಸಂಸ್ಮರಣಾ ವೇದಿಕೆಯಲ್ಲಿ ಮಂಜುನಾಥ್ ಎಜ್ಯುಕೇಶನ್ ಟ್ರಸ್ಟ್ ಮತ್ತು ಹೃದಯದಾಹಿನಿ ಕರ್ನಾಟಕ ಹಾಗೂ ಎಸ್.ಕೆ ಮುನ್ಸಿಪಾಲ್ ಎಂಪ್ಲಾಯಿಸ್ ಯೂನಿಯನ್ ಮಂಗಳೂರು ಜಂಟಿಯಾಗಿ ಆಯೋಜಿಸಿದ್ದ ದ್ವಿತೀಯ ಅನಿವಾಸಿ ಕನ್ನಡಿಗರ ಸಮ್ಮೇಳನ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನಾಧ್ಯಕ್ಷತೆ ವಹಿಸಿ ವಾಗ್ಮಿ-ಚಿಂತಕ ಲೆ| ಜ| ಡಾ| ಡೆವಿಡ್ ಫ್ರಾಂಕ್ ಫೆರ್ನಾಂಡಿಸ್ ನುಡಿದರು.
ಉದ್ಘಾಟನಾ ಸಮಾರಂಭದಲ್ಲಿ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ನವದೆಹಲಿ ಇದರ ರಾಷ್ಟ್ರೀಯ ಅಧ್ಯಕ್ಷ ಬಸವರಾಜ್ ಗುರಿಕಾರ್ ದೀಪ ಬೆಳಗಿಸಿ ಉಭಯ ಸಮ್ಮೇಳನಕ್ಕೆ ಚಾಲನೆಯನ್ನಿತ್ತರು. ವಿಶೇಷ ಆಮಂತ್ರಿತರಾಗಿ ಅನಿವಾಸಿ ಉದ್ಯಮಿಗಳಾದ ಸರ್ವೋತ್ತಮ ಶೆಟ್ಟಿ ಅಬುಧಾಬಿ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ರಾಜಕೀಯ ಧುರೀಣರುಗಳಾದ ಐವನ್ ಡಿ’ಸೋಜಾ (ಎಂಎಲ್‌ಸಿ), ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ರಾಧಾಕೃಷ್ಣ ಟಿ.ಶೆಟ್ಟಿ, ಅಡ್ವಕೇಟ್ ಪದ್ಮರಾಜ್ ಆರ್.ಪೂಜಾರಿ, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಜೆ.ಶೆಟ್ಟಿ ಜೆಪ್ಪು ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.

ಕನ್ನಡ ಭಾಷೆಯ ಮೇಲೆ ಜನರಿಗೆ ನನ್ನೆಯಿದೆ, ಪ್ರೀತಿಯಿದೆ. ಯಾರು ಅಸಾಹಯಕರು ಬಂದರೂ ಕೂಡಾ ಸಹಾಯ ನೀಡುವಂತಹ ಭಾಷೆಯೇ ನಮ್ಮನಿಮ್ಮೆಲ್ಲರ ಕನ್ನಡ ಭಾಷೆ ಆಗಿದೆ. ಇಂತಹ ಭಾಷೆಯ ಉಳಿವು ನಮ್ಮನಿಮ್ಮ ಹೊಣೆಯಾಗಿದೆ. ಅವಾಗಲೇ ನಮ್ಮ ಕನ್ನಡ ನಾಡು ಎಂದೆಂದಿಗೂ ಕಲ್ಪವೃಕ್ಷದಂತೆ ಬೆಳೆದು ಶ್ರೀಗಂಧವಾಗುತ್ತಾ ಉಳಿಯಲಿದೆ ಎಂದು ಸರ್ವೋತ್ತಮ ಶೆಟ್ಟಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಾಧಕ ದಂಪತಿಗಳಾದ ರಾಮ್ ಕೆ.ಶಿರೂರು ಮತ್ತು ಗೀತಾ ರಾಮ್ (ಕೀನ್ಯಾ ಆಫ್ರಿಕಾ), ರಾಧಾಕೃಷ್ಣ ಟಿ.ಶೆಟ್ಟಿ ಮತ್ತು ಉಷಾ ಆರ್.ಶೆಟ್ಟಿ (ಸೂರತ್ ಗುಜರಾತ್), ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಮತ್ತು ಆಲಿಸ್ ಫೆರ್ನಾಂಡಿಸ್ (ದುಬಾಯಿ ಯುಎಇ), ಪ್ರೊ| ಎಂ.ಬಿ. ಕುದರಿ ಮತ್ತು ಮಹಾನಂದ ಕುದರಿ (ಗೋಕಾಕ), ಎನ್.ಪಿ ಸುವರ್ಣ ಮತ್ತು ಪ್ರಭಾ ಸುವರ್ಣ (ಮುಂಬಯಿ) ಇವರಿಗೆ ‘ಗೋಲ್ಡನ್ ಕಪಲ್ ಅವಾರ್ಡ್’ ಪ್ರಶಸ್ತಿ ಹಾಗೂ ಡಾ| ಕ್ಯಾಥರಿನ್ ದಿನೇಶ್ (ಹುಬ್ಬಳ್ಳಿ), ಅವಿನಾಶ್ ಬಾಬು ಎನ್. (ಬೆಂಗಳೂರು), ಶಿವರಾಜ್ ಬಿ.ಪಾಂಡೇಶ್ವರ (ಮಂಗಳೂರು), ಬಸವರಾಜ್ ಎಂ. (ಮಾಲ್ಡೀವ್ಸ್), ಮೊಹಮ್ಮದ್ ಇಕ್ಬಾಲ್ (ಮಂಗಳೂರು), ಪ್ರೊ| ಸಂಜೀವ ನಾಯಕ್ (ಲಕ್ನೋ ಯುಪಿ) ಇವರಿಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಪ್ರದಾನಿಸಿ ಗೌರವಿಸಲಾಯಿತು.
ಅನ್ವಿತ್ ಕುಮಾರ್ ಸಿವಿ ಮತ್ತು ತನುಶ್ರೀ ಪ್ರಾರ್ಥನೆಯನ್ನಾಡಿದರು. ಅದಿವಾಸಿ ಕನ್ನಡಿಗರ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್ ಪ್ರಾಸ್ತವಿಕ ಭಾಷಣಗೈದ ಸ್ವಾಗತಿಸಿದರು. ನಾಗರಾಜ್ ಬಜಾಲ್ ಮತ್ತು ಪ್ರತಿಭಾ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಶಿವರಾಜ್ ಪಾಂಡೇಶ್ವರ ವಂದಿಸಿದರು.
ಮಧ್ಯಾಹ್ನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇದರ ಮಾಜಿ ಅಧ್ಯಕ್ಷ ಡಾ| ಸಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಜರುಗಿತು. ವಿಶೇಷ ಆಮಂತ್ರಿತರಾಗಿ ದರ್ಶನ್ ಎಚ್.ವಿ (ದ.ಕ ಜಿಲ್ಲಾಧಿಕಾರಿ), ಸಮಾಜ ಸೇವಕರಾದ ಮಿತ್ತಂಪ್ಪಾಡಿ ಜಯರಾಮ ರೈ ಅಬುಧಾಬಿ, ಚಿತ್ತರಂಜನ್ ಬೋಳಾರ್, ಕನ್ನಡ ಸಾಹಿತ್ಯ ಪರಿಷತ್‌ನ ಮಂಜುನಾಥ್ ರೇವಣ್ಕರ್, ಪ್ರದೀಪ್ ಕುಮಾರ್ ಕಲ್ಕೂರ, ಯದುಪತಿ ಗೌಡ, ಭಾರಧ್ವಜ್ (ಓಮೇಗಾ), ದೊಡ್ಡಪ್ಪ ಪೂಜಾರಿ ಉಂಡೆಕಲ್ಲ್ ಯಾದಗಿರಿ, ರತ್ನಾ ಕಾಳೇಗೌಡ ಕೆನಡಾ ಉಪಸ್ಥಿತರಿದ್ದರು.



