ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಪರಿಚಯಿಸಿರುವ ಅತಿ ಉನ್ನತ ಮಟ್ಟದ ಅಲ್ಟಾç ಪ್ರೀಮಿಯಮ್ ಪೆಟ್ರೋಲ್ ಸ್ಪೀಡ್-೧೦೦ ಎಂಬ ಹೊಸ ಉತ್ಪನ್ನವನ್ನು ರಾ.ಹೆ. ೬೬ರ ಸೋಮೇಶ್ವರ ಉಚ್ಚಿಲದ ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ಶನಿವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಭಾರತ್ ಪೆಟ್ರೋಲಿಯಂ ಸಂಸ್ಥೆಯ ಕರ್ನಾಟಕ ರಾಜ್ಯ ವಿಭಾಗ ಮುಖ್ಯಸ್ಥ ಪ್ರಕಾಶ್ ಬಿ. ನೂತನ ಉತ್ಪನ್ನವನ್ನು ಪ್ರೀಮಿಯಂ ವಾಹನಗಳ ಟಾಂಕಿಗೆ ತುಂಬಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಸೋಮೇಶ್ವರ ಫ್ಯೂಯೆಲ್ಸ್ನಲ್ಲಿ ನೂತನ ಉತ್ಪನ್ನ ಬಿಡುಗಡೆಗೊಳಿಸುತ್ತಿದ್ದು ಈ ಪಂಪ್ ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕರಿಗೆ ಕೇವಲ ಫ್ಯೂಯೆಲ್ ಮಾತ್ರವಲ್ಲದೆ ವಿವಿಧ ರೀತಿಯಲ್ಲಿ ಸೇವೆ ನೀಡುತ್ತಾ ಬಂದಿದೆ. ಇಲ್ಲಿ ಬಿಕೆಫೆ ಮೂಲಕ ಕಾಫೀ ಜೊತೆಗೆ ಸಮಯ ಕಳೆಯುವ ಅವಕಾಶ, ಸಂಸ್ಥೆಯ ವತಿಯಿಂದ ಡೈಲಿ ಫ್ರೆಶ್, ಅತ್ಯುತ್ತಮ ಶೌಚಾಲಯ, ಹೈಡ್ರೋಜನ್ ಗಾಳಿ ಸೇರಿದಂತೆ ಉತ್ತಮ ಸೇವೆ ಕೊಡುತ್ತಾ ಬಂದಿದ್ದು ಸಾರ್ವಜನಿಕರ ಸಹಕಾರ ಇನ್ನು ಮುಂದೆಯೂ ಇದೇ ರೀತಿಯಲ್ಲಿ ಲಭಿಸುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಲಯ ವಿಭಾಗ ಮುಖ್ಯಸ್ಥ ವಿಪಿನ್ ದಾಸ್, ಮಂಗಳೂರು ವಲಯ ಮಾರಾಟ ಪ್ರತಿನಿಧಿ ಭರತ್ ಎಚ್., ಸಂಸ್ಥೆಯ ಮಾಲೀಕ ರಾಜೇಶ್ ಕುಮಾರ್ ಶೆಟ್ಟಿ, ಸಂಸ್ಥೆಯ ವ್ಯವಸ್ಥಾಪಕ ರವೀಂದ್ರ ಶೆಟ್ಟಿ, ಕರ್ನಾಟಕ ರಾಜ್ಯ ಮುಖ್ಯಸ್ಥರು ಪ್ರಕಾಶ್ ಬಿ., ಮಂಗಳೂರು ವಲಯ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ರವಿಕುಮಾರ್ ಹಾಗೂ ಮಂಗಳೂರು ವಲಯ ವಿಭಾಗ ಸಂಯೋಜಕರು ಆನಂದ್ ವರ್ಮಾ ಉಪಸ್ಥಿತರಿದ್ದರು.

ಇದು ೧೦೦ಆಕ್ಟೇನ್ ರೇಟಿಂಗ್ ಹೊಂದಿರುವ ಇಂಧನವಾಗಿದೆ. ಆಕ್ಟೇನ್ ರೇಟಿಂಗ್ ಎಷ್ಟಿರುತ್ತದೆಯೋ, ಅಷ್ಟು ಹೆಚ್ಚು ಸಮರ್ಥವಾಗಿ ಎಂಜಿನ್‌ನಲ್ಲಿ ಇಂಧನವು ಉರಿಯುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ. ಇದನ್ನು ಮುಖ್ಯವಾಗಿ ಹೈ-ಪರ್ಫಾರ್ಮೆನ್ಸ್ ಕಾರುಗಳು ಮತ್ತು ಪ್ರೀಮಿಯಂ ಮೋಟಾರ್ ಸೈಕಲ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಆಧುನಿಕ, ಹೈ-ಕಂಪ್ರೆಶನ್ ಎಂಜಿನ್‌ಗಳಿಗೆ ಇದು ಅತ್ಯುತ್ತಮವಾಗಿದೆ. ಇತರ ಸಾಮಾನ್ಯ ಪೆಟ್ರೋಲ್ ಆಯ್ಕೆಗಳಿಗಿಂತ ಭಿನ್ನವಾಗಿದೆ. ಅನೇಕ ವರದಿಗಳ ಪ್ರಕಾರ, ಇದು ಹೆಚ್ಚಿನ ಎಥೆನಾಲ್ ಮಿಶ್ರಣವಿಲ್ಲದ ಶುದ್ಧ ಇಂಧನವಾಗಿದೆ, ಆದ್ದರಿಂದ ಹಳೆಯ ವಾಹನಗಳ ಮಾಲೀಕರು ಎಥೆನಾಲ್‌ನಿಂದ ಆಗುವ ಸಮಸ್ಯೆಗಳನ್ನು ತಪ್ಪಿಸಲು ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯ ಪೆಟ್ರೋಲ್‌ಗೆ ಹೋಲಿಸಿದರೆ ಇದರ ಬೆಲೆ ಹೆಚ್ಚಿರುತ್ತದೆ.
ಇದು ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿ ಸಿಗುವುದಿಲ್ಲ, ಆಯ್ದ ಪ್ರಮುಖ ಬಂಕ್‌ಗಳಲ್ಲಿ ಮಾತ್ರ ಲಭ್ಯವಿದ್ದು ಮಂಗಳೂರಿನಲ್ಲಿ ಹಾಗೂ ಉಚ್ಚಿಲದಲ್ಲಿ ಮಾತ್ರ ಈ ಉತ್ಪನ್ನ ಲಭ್ಯವಿದೆ ಎಂದು
ಸೋಮೇಶ್ವರ ಫ್ಯೂಯೆಲ್ಸ್ ಮಾಲಕರಾದ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.


