ಮೂಡುಬಿದಿರೆ: ತಾಲೂಕಿನ ಮಿಜಾರು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಟದ ಮೈದಾನದಲ್ಲಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿರುವ ಶಾಲಾ ಆಡಳಿತ ಮಂಡಳಿಯ ನಿರ್ಧಾರಕ್ಕೆ ತೋಡಾರು, ಬಡಗಮಿಜಾರು ಮತ್ತು ತೆಂಕಮಿಜಾರು ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಡಿ.ಎ ಉಸ್ಮಾನ್ ಸುಮಾರು ನೂರು ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಈಗಾಗಲೇ ಮಂಜೂರಾಗಿರುವ ನಾಲ್ಕು ಹೊಸ ಕೊಠಡಿಗಳನ್ನು ಮೈದಾನದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದರಿಂದ ದಶಕಗಳ ಇತಿಹಾಸವಿರುವ ಕ್ರೀಡಾಂಗಣದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಮೈದಾನವು ವಲಯ, ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಿಗೆ ಸಾಕ್ಷಿಯಾದ ಈ ಭಾಗದ ಏಕೈಕ ಪ್ರಮುಖ ಗ್ರಾಮೀಣ ಕ್ರೀಡಾಂಗಣವಾಗಿದೆ. ಸುಮಾರು 85 ವರ್ಷಗಳ ಹಿಂದೆ 2.95 ಎಕರೆ ಜಾಗವನ್ನು ಆಟದ ಮೈದಾನಕ್ಕೆಂದೇ ಕಾಯ್ದಿರಿಸಲಾಗಿತ್ತು. ಅದರಲ್ಲಿ ಈಗಾಗಲೇ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಕಟ್ಟಡಗಳಿಗಾಗಿ 95 ಸೆಂಟ್ಸ್ ಬಿಟ್ಟುಕೊಡಲಾಗಿದ್ದು, ಸದ್ಯ ಕೇವಲ 2 ಎಕರೆ ಮಾತ್ರ ಉಳಿದಿದೆ. ಈಗ ಇದನ್ನೂ ಕಟ್ಟಡ ನಿರ್ಮಾಣಕ್ಕೆ ಬಳಸಿದರೆ ವಿದ್ಯಾರ್ಥಿಗಳಿಗೆ ಆಟೋಟಗಳಿಗೆ ಜಾಗವೇ ಇಲ್ಲದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಬದಲಿ ವ್ಯವಸ್ಥೆಗೆ ಆಗ್ರಹ: “ಮೈದಾನವನ್ನು ಹಾಳುಮಾಡುವ ಬದಲು, ಶಾಲೆಯಲ್ಲಿರುವ40 ವರ್ಷ ಹಳೆಯದಾದ, ಜೀರ್ಣಾವಸ್ಥೆಯಲ್ಲಿರುವ ಹಂಚಿನ ಮಾಡಿನ ಕೊಠಡಿಗಳನ್ನು ತೆರವುಗೊಳಿಸಿ ಅಲ್ಲಿಯೇ ಹೊಸ ಕಟ್ಟಡ ನಿರ್ಮಿಸಲಿ” ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರು (DDPI), ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಿಗೆ ಪೋಷಕರು ಮನವಿ ಸಲ್ಲಿಸಿ, ಮೈದಾನವನ್ನು ಅದರ ಮೂಲ ರೂಪದಲ್ಲಿ ಉಳಿಸಿಕೊಡುವಂತೆ ಆಗ್ರಹಿಸಿದ್ದಾರೆ.
ತೆಂಕಮಿಜಾರು ಗ್ರಾ.ಪಂ ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ತಾ.ಪಂ ಮಾಜಿ ಸದಸ್ಯ ಎಂ.ಜಿ ಮಹಮ್ಮದ್ , ಗ್ರಾ.ಪಂ ಸದಸ್ಯ ಎಂ.ಎ ರಝಾಕ್ , ಎಂ.ಎ ಅಶ್ರಪ್, ಗ್ರಾಮಸ್ಥರಾದ ನವದೀಪ್ ಶೆಟ್ಟಿ, ಝುಬೇರ್, ಅಫೀಝ್ ಸುದ್ದಿಗೋಷ್ಠಿಯಲ್ಲಿದ್ದರು.


