ಬಜ್ಪೆ: ಕರಂಬಾರು ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘ (ರಿ.), ಶಾಲಾ ಅಭಿವೃದ್ಧಿ ಸಮಿತಿ, ಮುಖ್ಯೋಪಾಧ್ಯಾಯರು, ಸಹಶಿಕ್ಷಕರು ಹಾಗೂ ಪೋಷಕರ ಸಹಕಾರದೊಂದಿಗೆ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.

ಆಟಿಡೊಂಜಿ ದಿನ’ ಕಾರ್ಯಕ್ರಮಕ್ಕೆ ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಆಟಿ ತಿಂಗಳಲ್ಲಿ ಪ್ರಕೃತಿಯಲ್ಲಿ ಹಲವು ಬದಲಾವಣೆಗಳಾಗುತ್ತವೆ. ಈ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಮ್ಮ ಹಿರಿಯರು ನಲಿಕೆ, ತಜಂಕ್, ಪತ್ರೊಡೆ, ಗೇರುಸೊಪ್ಪು, ಮತ್ತು ವಿವಿಧ ಕಾಡಿನ ಗೆಡ್ಡೆ-ಗೆಣಸುಗಳನ್ನು ಬಳಸಿ ವಿಶೇಷ ಅಡುಗೆಗಳನ್ನು ತಯಾರಿಸುತ್ತಿದ್ದರು. ಆಟಿ ಕೂಟದ ಮೂಲಕ ಇಂದಿನ ಯುವ ಪೀಳಿಗೆಗೆ ಈ ಆರೋಗ್ಯಕರ ಊಟದ ರುಚಿ ಮತ್ತು ಮಹತ್ವವನ್ನು ಪರಿಚಯಿಸಲಾಗುತ್ತದೆ ಎಂದು ಹೇಳಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜನಪದ ಚಿಂತಕ ಮತ್ತು ದೈವಾರಾಧನೆ ಸಂಶೋಧಕ, ತುಳು ವಾಗ್ಮಿ ವಿಜೇತ್ ಎಂ. ಮಂಜನಾಡಿ ಅವರು ಆಟಿ ತಿಂಗಳ ವಿಶೇಷತೆ ಹಾಗೂ ತುಳುನಾಡಿನ ಸಂಸ್ಕೃತಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗುಣಪಾಲ ದೇವಾಡಿಗ, ಶ್ರೀ ಮರಿಯಮ್ಮ ಕೋಟಿ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಜಗನ್ನಾಥ್ ಸಾಲ್ಯಾನ್, ಉದ್ಯಮಿಗಳಾದ ವಿಜಯಕುಮಾರ್ ಕಾನ, ಕಿಶನ್ ಬಿ. ಶೆಟ್ಟಿ ಮರಪೂರು, ಬಜ್ಪೆ ಪಟ್ಟಣ ಪಂಚಾಯತ್ ಕೌನ್ಸಿಲರ್ ರಾಜೇಶ್ ಅಮೀನ್, ಶಾಲೆಯ ಮುಖ್ಯೋಪಾಧ್ಯಾಯಿನಿ ಸೀತಮ್ಮ ,ಯುವ ಕಾಂಗ್ರೆಸ್ ಮುಖಂಡ ಮಂಜುಪ್ರಸಾದ್ ಶೆಟ್ಟಿ, ನಿವೃತ್ತ ಅಂಚೆ ಅಧಿಕಾರಿ ರಮೇಶ್ ಸುವರ್ಣ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಾಡಿನ ಸಂಪ್ರದಾಯದ ವಿವಿಧ ಆಟಿ ತಿಂಗಳ ತಿಂಡಿ-ತಿನುಸುಗಳು ಹಾಗೂ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಲಾಯಿತು.
ಹಳೆ ವಿದ್ಯಾರ್ಥಿ ಸಂಘ ಉಪಾಧ್ಯಕ್ಷ ರಾಕೇಶ್ ಕುಂದರ್ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ವಿಶ್ವನಾಥ್ ದೇವಾಡಿಗ ವಂದಿಸಿದರು. ತೃಪ್ತಿ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು.


