ಸೌದಿ ಅರೇಬಿಯಾ: ಅಧಿಕಾರ ಶಾಶ್ವತವಲ್ಲ. ನಿನ್ನೆ ಬೇರೊಬ್ಬರೊಂದಿಗಿತ್ತು. ಇಂದು ಮತ್ತೊಬ್ಬರಲ್ಲಿದೆ. ಅದು ನಾಳೆ ಇನ್ನೊಬ್ಬರದ್ದಾಗಲಿದೆ. ನಮ್ಮೊಂದಿಗೆ ಅಧಿಕಾರವಿದ್ದಾಗ ಜನರು ನಮ್ಮ ಮನೆಗೆ ಬರುತ್ತಲೇ ಇರುತ್ತಾರೆ. ಆದರೆ ಅಧಿಕಾರದಲ್ಲಿರುವಾಗ ನಮ್ಮ ಬಳಿಗೆ ಎಷ್ಟು ಜನ ಬರುತ್ತಾರೆ ಎನ್ನುವುದು ಮುಖ್ಯವಲ್ಲ ಬದಲಾಗಿ ನಮ್ಮ ಅಂತ್ಯ ಸಂಸ್ಕಾರಕ್ಕೆ ಬಂದು ನಮಗೆ ಎಷ್ಟು ಜನರು ಬೆನ್ನು ಕೊಡುತ್ತಾರೆ, ಪ್ರಾರ್ಥನೆ ಮಾಡುತ್ತಾರೆ ಎನ್ನವುದೇ ಮುಖ್ಯ. ಆ ನಿಟ್ಟಿನಲ್ಲಿ ಪ್ರೀತಿಯಿಂದ, ಸೌಹಾರ್ದತೆಯಿಂದ ಜೀವನ ಸಾಗಿಸಿ ನಾವು ಜನತೆಯ ಹೃದಯದಲ್ಲಿ ಸ್ಥಾನ ಪಡೆಯಬೇಕು. ಆ ಮೂಲಕ ನಮ್ಮ ವ್ಯಕ್ತಿತ್ವವನ್ನು ರೂಪಿಸುವಂತಹ ಕೆಲಸವು ಇಂದು ಆಗಬೇಕಾಗಿದೆ ಎಂದು ಕರ್ನಾಟಕ ವಿಧಾನಸಭಾ ಸ್ವೀಕರ್ ಯುಟಿ ಖಾದರ್ ಹೇಳಿದ್ದಾರೆ.

ಅವರು ಸೌದಿ ಅರೇಬಿಯಾದ ಜುಬೈಲಿನಲ್ಲಿ ಕೆಐಸಿ ನ್ಯಾಷನಲ್ ಕಮಿಟಿಯು ಹಮ್ಮಿಕೊಂಡಿದ್ದ KIC Elevation Summit ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಪುತ್ತೂರು ಶಾಕರಾದ ಆಶೋಕ್ ಕುಮಾರ್ ರೈ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಶಿಕ್ಷಿತರಾಗಬೇಕೆಂಬುದು ನನ್ನ ಬಹುದೊಡ್ಡ ಕನಸು. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ ಕ್ಷೇತ್ರ ಮಾತ್ರ ನಿಜಕ್ಕೂ ಅಭಿವೃದ್ಧಿ ಹೊಂದಿದ ಕ್ಷೇತ್ರವೆನ್ನುವುದು ನನ್ನ ನಂಬಿಕೆ. ಹಾಗಾಗಿ ನನ್ನ ಕ್ಷೇತ್ರದಲ್ಲಿ ವಿದ್ಯೆ ನೀಡುವ ಯಾರೇ ಆದರೂ ಸರಿ ಅವರನ್ನು ನಾನು ಅಪ್ಪಿಕೊಳ್ಳುತ್ತೇನೆ. ಅವರು ಎಲ್ಲಿಗೆ ಕರೆದರೂ ನಾನು ಹೋಗುತ್ತೇನೆ. ಅದೇ ನಿಟ್ಟಿನಲ್ಲಿ ನಿಮ್ಮ ಮುಂದೆ ಸೌದಿ ಅರೇಬಿಯಾದಲ್ಲಿದ್ದೇನೆ. ಕೆಐಸಿ ಕುಂಬ್ರ ಸಂಸ್ಥೆಯ ಯೋಜನೆಗೆ ಸರಕಾರದಿಂದ ಸಹಕಾರವನ್ನು ನೀಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ಕೊಟ್ಟರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿನ್ನಲೆಯಲ್ಲಿ ಅಲ್ ಮುಝೈನ್ ಚೇಯರ್ಮಾನ್ ಝಕರಿಯಾ ಜೋಕಟ್ಟೆಯವರು ಸನ್ಮಾನ ಸ್ವೀಕರಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಶಿಕ್ಷಣ ಎಲ್ಲಿದೆ ಅಲ್ಲಿ ಭವಿಷ್ಯವಿದೆ. ಶಿಕ್ಷಣದಿಂದ ಈ ಸಮಾಜವನ್ನು ಎತ್ತರಕ್ಕೆ ಬೆಳೆಸಬಹುದು. ಸರಿಯಾದ ದೂರದೃಷ್ಟಿಯ ಶಿಕ್ಷಣವು ಈ ಕಾಲದ ಬೇಡಿಯಾಗಿದೆ.ಅದನ್ನು ಮನಗಂಡ ಕೆಐಸಿ ತಂಡವು ಅಮೋಘ ಸಾಧನೆ ಮಾಡುವ ಹಾದಿಯಲ್ಲಿದೆ. ದಾನವು ವಿಪತ್ತುಗಳಿಂದ ಕಾಪಾಡುತ್ತದೆ. ಉತ್ತಮ ಶಿಕ್ಷಣವು ಉತ್ತಮ ಪ್ರಜೆಯನ್ನಾಗಿಸುತ್ತದೆ. ಒಂದು ಉತ್ತಮ ಸಂಜೆಯಲ್ಲಿ ಎಲ್ಲರನ್ನು ಜೊತೆಗೂಡಿಸಿದ್ದು ಒಂದು ರೀತಿಯ ರೆಕಾರ್ಡ್ ಆಗಿದೆ. ಆ ಹಿನ್ಲಲೆಯಲ್ಲಿ ಸಂಘಟಕರನ್ನ ನಾನು ಅಭಿನಂದಿಸುತ್ತೇನೆ. ಸಮಾಜದ ಏಳಿಗೆಗಾಗಿ ದುಡಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಝಕರಿಯಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಎಕ್ಸ್ ಪರ್ಟೈಸ್ ನ ವೈಸ್ ಪ್ರೆಸಿಡೆಂಟ್ ಅಶ್ರಫ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕೆಐಸಿ ಕುಂಬ್ರವು ಮುಂದಿನ ದಿನದಲ್ಲಿ ಕ್ರಾಂತಿ ನಿರ್ಮಿಸುವ ದೂರದೃಷ್ಟಿ ಕಾಣಿಸುತ್ತಿದೆ. ವಿವಿಧ ಸ್ಥರಗಳಲ್ಲಿ ಶಿಕ್ಷಣ ನೀಡುವ ಗುರಿ ನಿಜಕ್ಕೂ ಶ್ಲಾಘನೀಯ. ಕೆಐಸಿ ಜೊತೆಗೆ ನಾವು ಬೆನ್ನೆಲುಬಾಗಿ ನಿಲ್ಲುತ್ತೇವೆ. ಯಾಕೆಂದರೆ ಶಿಕ್ಷಣವೇ ನಮ್ಮ ಸಮುದಾಯದ ಅಭಿವೃದ್ಧಿ. ಶಿಕ್ಷಣದ ಮೂಲಕ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದು ಹೇಳಿದರು.
ಕೆಐಸಿ ಸಂಸ್ಥೆಯ ಕಾರ್ಯದರ್ಶಿ ಅನೀಸ್ ಕೌಸರಿ ದಿಕ್ಸೂಚಿ ಭಾಷಣದ ಮೂಲಕ ಸಂಸ್ಥೆಯ ಯೋಜನೆ ಮತ್ತು ಯೋಚನೆಯನ್ನು ಸಭೆಯ ಮುಂದಿಟ್ಟರು. ಮಾಜಿ ಶಾಸಕರಾದ ಮೊಯಿದೀನ್ ಬಾವಾ, ಭಾರತ್ ಕನ್ಸ್ಟಕ್ಸನ್ ಸಿಇಓ ಮುಸ್ತಫಾ ಭಾರತ್, ಪ್ರಿಸಿಶನ್ ವಾಲ್ವ್ಸ್ ಎಂಡಿ ಯೂನುಸ್ ಸೆಯ್ಯದ್ ಸಂದರ್ಭೋಚಿತವಾಗಿ ಮಾತನಾಡಿ ಸಂಘಟಕರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಇಫ್ತಿಕಾರ್ ಯುಟಿ ಸೇರಿದಂತೆ ವಿವಿಧ ಪ್ರತಿಷ್ಠಿತ ಕಂಪೆನಿಗಳ ಮಾಲಕರು ಭಾಗವಹಿಸಿದ್ದರು.
ಕೆಐಸಿ ಕುಂಬ್ರ ಇದರ ಅಧ್ಯಕ್ಷರಾದ ಕೆಪಿ ಆಕರ್ಷಣ್ ಅಹಮದ್ ಸಭೆಯನ್ನು ಉದ್ಘಾಟಿಸಿ, ಕಕಾರ್ಯಕ್ರಮದ ಚೇಯರ್ಮ್ಯಾನ್ ಅಬ್ದುಲ್ ಹಮೀದ್ ಅಸ್ಕಾಫ್ ಸ್ವಾಗತಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಐಸಿ ಸೆಂಟ್ರಲ್ ಕಮೀಟಿ ಅಧ್ಯಕ್ಷರಾದ ತಾಹೀರ್ ಸಾಲ್ಮರ ಅಧ್ಯಕ್ಷೀಯ ಭಾಷಣ ಮಾಡಿ ಧನ್ಯವಾದ ಸಲ್ಲಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.


