ಪ್ರತಾಪ್ ಚೌಹಾನ್ ಹತ್ಯೆ, ಅಸದ್ ಎನ್‌ಕೌಂಟರ್ ಮತ್ತು ಯೋಗಿ ಸರ್ಕಾರದ ಎನ್‌ಕೌಂಟರ್ ನೀತಿ: ನ್ಯಾಯ, ಅಸಮಾನತೆ ಮತ್ತು ಸಾಮಾಜಿಕ ಧ್ರುವೀಕರಣ

Date:

ಲಕ್ನೋ: ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ 17 ವರ್ಷದ ಸೂರ್ಯ ಪ್ರತಾಪ್ ಚೌಹಾನ್ ಅವರ ದಾರುಣ ಹತ್ಯೆಯು ಸಮಾಜದಲ್ಲಿ ಆಳವಾದ ಆಘಾತವನ್ನುಂಟು ಮಾಡಿದೆ. ಬಕ್ರೀದ್ ದಿನದಂದು ನಡೆದ ಈ ಘಟನೆಯಲ್ಲಿ ಆರೋಪಿ ಅಸದ್ ಮತ್ತು ಅವನ ಸಂಗಾತಿಗಳು ಯುವಕನನ್ನು ಚಾಕುವಿನಿಂದ ತಿವಿದು ಕೊಂದಿದ್ದಾರೆ ಎಂಬ ಆರೋಪವಿದೆ. ಕೆಲವು ದಿನಗಳಲ್ಲೇ ಅಸದ್ ಅವರನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ. ಈ ಘಟನೆಯು ಭಾರತದಲ್ಲಿ ಪೊಲೀಸ್ ಎನ್‌ಕೌಂಟರ್‌ಗಳ ವಿವಾದಾತ್ಮಕ ಪ್ರವೃತ್ತಿಯನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ.

ಇದು ಕೇವಲ ಒಂದು ವೈಯಕ್ತಿಕ ಘಟನೆಯಲ್ಲ; ಇದು ಆಧುನಿಕ ಜನಪ್ರಿಯ ಪ್ರಜಾಪ್ರಭುತ್ವದಲ್ಲಿ ಕಾನೂನು ಸುವ್ಯವಸ್ಥೆ, ನ್ಯಾಯದ ಸಿದ್ಧಾಂತ ಮತ್ತು ಸಾಮಾಜಿಕ ಧ್ರುವೀಕರಣದ ನಡುವಿನ ಗಂಭೀರ ಸವಾಲನ್ನು ಪ್ರತಿಬಿಂಬಿಸುತ್ತದೆ. ಪೊಲೀಸ್ ಎನ್‌ಕೌಂಟರ್ ಎಂದರೆ ಕಾನೂನುಬದ್ಧ ಸ್ವಯಂರಕ್ಷಣೆಯಲ್ಲಿ ನಡೆಯುವ ಘರ್ಷಣೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಆದರೆ ಅಪರಾಧ ಸಾಬೀತಾಗುವ ಮುನ್ನ ಆರೋಪಿಯನ್ನು ಕೊಲ್ಲುವುದು ಎಷ್ಟು ಸರಿ? ಎಂಬ ಪ್ರಶ್ನೆ ಸಾಕಾಲಿಕವಾಗಿದೆ! ಭಾರತೀಯ ಸಂವಿಧಾನದ ಅನುಚ್ಛೇದ 21ರ ಪ್ರಕಾರ ಪ್ರತಿಯೊಬ್ಬರಿಗೂ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿದೆ. ಸುಪ್ರೀಂ ಕೋರ್ಟ್ 2014ರ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) vs ಸ್ಟೇಟ್ ಆಫ್ ಮಹಾರಾಷ್ಟ್ರ ತೀರ್ಪಿನಲ್ಲಿ ಎನ್‌ಕೌಂಟರ್‌ಗಳಿಗೆ 16 ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ನೀಡಿದೆ — FIR ದಾಖಲು, ಸ್ವತಂತ್ರ ತನಿಖೆ, ಮ್ಯಾಜಿಸ್ಟ್ರೇಟ್ ವಿಚಾರಣೆ, ಫಾರೆನ್ಸಿಕ್ ಪರೀಕ್ಷೆ ಮುಂತಾದವು.

ಈ ಮಾರ್ಗಸೂಚಿಗಳು ಫೇಕ್ ಎನ್‌ಕೌಂಟರ್‌ಗಳನ್ನು ತಡೆಯುವ ಉದ್ದೇಶ ಹೊಂದಿವೆ. ಆದರೆ ವಾಸ್ತವದಲ್ಲಿ, ಯೋಗಿ ಆದಿತ್ಯನಾಥ್ ಸರ್ಕಾರದ ಅವಧಿಯಲ್ಲಿ (2017ರಿಂದ 2026ರವರೆಗೆ) ಉತ್ತರ ಪ್ರದೇಶದಲ್ಲಿ ಹತ್ತಾರು ಸಾವಿರ ಎನ್‌ಕೌಂಟರ್‌ಗಳು ನಡೆದಿವೆ.
ಅಧಿಕೃತ ದತ್ತಾಂಶಗಳ ಪ್ರಕಾರ, ಮಾರ್ಚ್ 2017ರಿಂದ ಮೇ 2026ರವರೆಗೆ ಸುಮಾರು 17,043 ಎನ್‌ಕೌಂಟರ್ ಕಾರ್ಯಾಚರಣೆಗಳು ನಡೆದಿವೆ. ಇದರಲ್ಲಿ 289 ಕ್ರಿಮಿನಲ್‌ಗಳು (ಎಂದು ಆನಂತರ ಪೋಲೀಸ್ ನೀಡಿದ ಆಧಾರದಲ್ಲಿ) ಮೃತಪಟ್ಟಿದ್ದಾರೆ ಮತ್ತು ಸುಮಾರು 11,000ಕ್ಕೂ ಹೆಚ್ಚು ಆರೋಪಿಗಳು ಗಾಯಗೊಂಡಿದ್ದಾರೆ. ಇದು ದಿನಕ್ಕೆ ಸರಾಸರಿ 5 ಎನ್‌ಕೌಂಟರ್‌ಗಳಂತೆ ಕಾಣುತ್ತದೆ. ಯೋಗಿ ಸರ್ಕಾರದ “ಜೀರೋ ಟಾಲರೆನ್ಸ್” ಹೆಸರಿನಲ್ಲಿ ನಡೆಸುವ ನಕಲಿ ಎನ್ಕೌಂಟರ್ ನೀತಿಯನ್ನು ಇದು ಪ್ರತಿಬಿಂಬಿಸುತ್ತದೆ.

ಮುಸ್ಲಿಂ ಸಮುದಾಯದ ಮೇಲಿನ ಅಸಮಾನತೆಯ ಅಂಕಿ ಅಂಶಗಳು:
ಈ ಎನ್‌ಕೌಂಟರ್‌ಗಳಲ್ಲಿ ಸಮುದಾಯಗಳ ನಡುವಿನ ಅಸಮಾನತೆ ಸ್ಪಷ್ಟವಾಗಿ ಕಾಣುತ್ತದೆ.
2017ರಿಂದ 2020ರವರೆಗಿನ ಅವಧಿಯಲ್ಲಿ 124-125 ಮಂದಿ ಮೃತಪಟ್ಟಿದ್ದಲ್ಲಿ ಸುಮಾರು 47 ಮಂದಿ (37%) ಮುಸ್ಲಿಂ ಸಮುದಾಯದವರಾಗಿದ್ದರು. ಉತ್ತರ ಪ್ರದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಸುಮಾರು 19% ಮಾತ್ರವಿರುವುದನ್ನು ಗಮನಿಸಿದರೆ ಇದು ಗಣನೀಯ ಅನುಪಾತವಾಗಿದೆ. ಮಾನವ ಹಕ್ಕು ಸಂಘಟನೆಗಳು (ಉದಾ. Citizen’s Against Hate) 17 ಎನ್‌ಕೌಂಟರ್ ಪ್ರಕರಣಗಳಲ್ಲಿ 15 ಮಂದಿ ಮುಸ್ಲಿಂ ಆಗಿದ್ದರು ಎಂದು ತಿಳಿಸಿವೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿ (ಮೀರತ್, ಘಾಜಿಯಾಬಾದ್ ಮುಂತಾದ ಪ್ರದೇಶಗಳಲ್ಲಿ) ಮುಸ್ಲಿಂ ಯುವಕರ ಮೇಲೆ ಎನ್‌ಕೌಂಟರ್‌ಗಳು ಹೆಚ್ಚಾಗಿರುವುದು, ಹಿಂದೂ ಗ್ಯಾಂಗ್‌ಸ್ಟರ್‌ಗಳಾದ ವಿಕಾಸ್ ದುಬೆ (ಬ್ರಾಹ್ಮಣ) ಅಥವಾ ಇತರ ಜಾತಿಗಳ ಆರೋಪಿಗಳಿಗಿಂತ ತ್ವರಿತ ಕ್ರಮ ಕಾಣುವುದು ಈ ಆರೋಪಕ್ಕೆ ಪೂರಕವಾಗಿದೆ. ಇದು ಯೋಗಿ ಸರ್ಕಾರದ ಪೊಲೀಸ್ ವ್ಯವಸ್ಥೆಯಲ್ಲಿ ಮುಸ್ಲಿಂ ವಿರೋಧಿ ಪ್ರವೃತ್ತಿ ಇದೆ ಎಂಬ ತೀವ್ರ ಆರೋಪಕ್ಕೆ ಬಲವಾದ ಆಧಾರವನ್ನು ನೀಡುತ್ತದೆ. ಅಪರಾಧ ಸಾಬೀತಾಗುವ ಮುನ್ನ ರಾಜ್ಯವೇ ‘ನ್ಯಾಯ’ ವಿತರಿಸುವ ಮಾದರಿ ಸಂವಿಧಾನದ ಅನುಚ್ಛೇದ 21 ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸೆಲೆಬ್ರೇಷನ್ ಮತ್ತು ಫ್ಯಾಸಿಸ್ಟ್ ಮನಸ್ಥಿತಿ:
ಸಾಮಾಜಿಕ ಜಾಲತಾಣಗಳಲ್ಲಿ ಎನ್‌ಕೌಂಟರ್‌ಗಳನ್ನು ‘ನ್ಯಾಯ’ ಎಂದು ಸಂಭ್ರಮಿಸುವ ಪ್ರವೃತ್ತಿ ಖಂಡನೀಯ. ಇದು ಘೋರ ಅಪರಾಧಕ್ಕೆ ಪ್ರತಿಕ್ರಿಯೆಯಾಗಿ ಬರುವ ಭಾವನಾತ್ಮಕ ಪ್ರತಿಕ್ರಿಯೆಯಾಗಿರಬಹುದು. ಆದರೆ ಇದು ‘ನ್ಯಾಯ’ವನ್ನು ‘ಪ್ರತೀಕಾರ’ದಲ್ಲಿ ಬದಲಾಯಿಸುತ್ತದೆ. ಇದು ಫ್ಯಾಸಿಸ್ಟ್ ಮನಸ್ಥಿತಿಯ ಲಕ್ಷಣಗಳನ್ನು ಹೊಂದಿದೆ — ರಾಜ್ಯದ ಬಲವನ್ನು ಬಳಸಿಕೊಂಡು ‘ಮುಸ್ಲಿಮರನ್ನು ಸ್ವಯಂ ಶತ್ರುಗಳೆಂದು ಬಿಂಬಿಸಿ ಆ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಮುಸ್ಲಿಂ ಆರೋಪಿಗಳನ್ನು ನಿರ್ಮೂಲನೆ ಮಾಡುವ ಆಸೆ. ಇಂತಹ ಸಂಭ್ರಮವು ಸಮಾಜದಲ್ಲಿ ಧ್ರುವೀಕರಣವನ್ನು ಹೆಚ್ಚಿಸುತ್ತದೆ ಮತ್ತು ಕಾನೂನುಬದ್ಧ ಪ್ರಕ್ರಿಯೆಯನ್ನು ಅವಹೇಳನ ಮಾಡುತ್ತದೆ. ಇದೇ ಸಮಯದಲ್ಲಿ, ಅಪರಾಧಗಳು ನಡೆದಾಗ ಸಮಾಜದ ಪ್ರತಿಕ್ರಿಯೆಯಲ್ಲಿ ಧರ್ಮೀಯ ಫಿಲ್ಟರ್ ಕಾಣಿಸುವುದು ದುರಂತ.
ಯೋಗಿ ಸರ್ಕಾರವು ಈ ಕ್ರಮಗಳಿಂದಾಗಿ ಕ್ರೈಮ್ ದರಗಳು ರಾಷ್ಟ್ರೀಯ ಸರಾಸರಿಗಿಂತ ಕೆಳಗೆ ಬಂದಿವೆ ಎಂದು ಹೇಳುತ್ತದೆ. ಆದರೆ ಇದಕ್ಕೆ ಬೆಲೆ ಏನು? ಎನ್‌ಕೌಂಟರ್ ರಾಜ್ ಕ್ರೈಮ್ ನಿಯಂತ್ರಣಕ್ಕೆ ಸಹಾಯಕವಾಗಬಹುದು, ಆದರೆ ಅದು ಕಾನೂನು ಆಳ್ವಿಕೆಯನ್ನು (Rule of Law) ಬದಲು “ರಾಜ್ಯದ ದೌರ್ಜನ್ಯ”ಕ್ಕೆ ತಳಪು ಹಾಕುತ್ತದೆ. ಮುಸ್ಲಿಂ ಸಮುದಾಯದಲ್ಲಿ ಭಯ ಮತ್ತು ಅಪರಾಧೀಕರಣದ ಭಾವನೆ ಬೆಳೆಯುತ್ತಿದೆ.
ಪ್ರತಾಪ್ ಚೌಹಾನ್ ಅವರ ಹತ್ಯೆಯು ಖಂಡನೀಯ. ಅಸದ್ ಅವರ ಎನ್ಕೌಂಟರ್ ಸೂಕ್ತನಡೆಯಾಗಿ ಕಾಣಿಸುತ್ತಿಲ್ಲ ಅಥವಾ ಪೊಲೀಸ್ ನಡೆಯಲ್ಲಿ ಸಂಶಯಗಳು ಎದ್ದುಕಾಣುತ್ತಿವೆ — ಇದನ್ನು ಸ್ವತಂತ್ರ ತನಿಖೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಬೇಕು. ಈ ರೀತಿಯ ಎನ್ಕೌಂಟರ್ ಗಳನ್ನು ತಡೆಯಲು ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಬೇಕಿದೆ. ಬಲವಾದ ಪೊಲೀಸ್ ಸುಧಾರಣೆ, ತ್ವರಿತ ನ್ಯಾಯಾಲಯಗಳು, ಪಾರದರ್ಶಕ ತನಿಖೆಗಳು ಮತ್ತು ಸಮಾಜದಲ್ಲಿ ನ್ಯಾಯದ ಮೇಲಿನ ವಿಶ್ವಾಸವನ್ನು ಬೆಳೆಸುವುದರಲ್ಲಿದೆ. ‘ಎನ್‌ಕೌಂಟರ್ ಜಸ್ಟಿಸ್’ ‘ಬುಲ್ಡೊಝರ್ ಜಸ್ಟೀಸ್’ ಎಲ್ಲಾ ಜನಪ್ರಿಯವಾಗುತ್ತಿರುವುದು ನಮ್ಮ ಜನಪ್ರಿಯ ಪ್ರಜಾಪ್ರಭುತ್ವದ ವೈಫಲ್ಯವನ್ನು ಸೂಚಿಸುತ್ತದೆ.
ಸತ್ಯಾನ್ವೇಷಣೆಯು ಭಾವನೆಗಳಿಗಿಂತ ಮೇಲಾಗಿರಬೇಕು. ಎಲ್ಲಾ ಅಪರಾಧಿಗಳಿಗೂ ಕಾನೂನಿನ ಮುಂದೆ ನಿಲ್ಲಿಸುವುದು ಮತ್ತು ನಿಜವಾದ ನ್ಯಾಯವನ್ನು ಒದಗಿಸುವುದು — ಇದೇ ಪ್ರಗತಿಪರ ಸಮಾಜದ ಗುಣಲಕ್ಷಣ. ಧರ್ಮೀಯ ತಾರತಮ್ಯದ ಮೂಲಕ ಕ್ರಮ ತೆಗೆದುಕೊಳ್ಳುವುದು ಸಮಾಜವನ್ನು ಇನ್ನಷ್ಟು ಒಡೆಯುತ್ತದೆ. ನಿಜವಾದ ಪ್ರಗತಿ ಸಮಾನ ನ್ಯಾಯದಲ್ಲಿ ಮಾತ್ರ ಸಾಧ್ಯ. ಮೊದಲಿಗೆ ಯೋಗಿ ಸರ್ಕಾರ ಈ ದೇಶದ ಕಾನೂನು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಡಿಯಲ್ಲಿ ಆಡಳಿತ ಮಾಡಲು ಮುಂದಾಗಬೇಕು. ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ತನ್ನ ಫೇಸ್ಬುಕ್ ಪೋಸ್ಟ್ ಮೂಲಕ ಆಗ್ರಹಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...

ಜೂನ್ 3ಕ್ಕೆ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ಫಲಿತಾಂಶ

ಮೂಡಬಿದಿರೆ: ಕಳೆದ 10 ತಿಂಗಳ ಹಿಂದೆ ನಡೆದಿದ್ದ ಕಲ್ಲಬೆಟ್ಟು ಸೇವಾ ಸಹಕಾರಿ...