ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಕಾರ್ಯದರ್ಶಿಯಾಗಿ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಡಾ. ರತನ್ ಯು. ಕೇಳ್ಕರ್ ಅವರನ್ನು ನೇಮಕ ಮಾಡಲಾಗಿದೆ.
ಈ ನೇಮಕ ರಾಜ್ಯದಲ್ಲಿ ವಿವಾದದ ಅಲೆ ಎಬ್ಬಿಸಿದ್ದು, ವಿರೋಧ ಪಕ್ಷವಾದ ಸಿಪಿಎಂ ಹಾಗೂ ಬಿಜೆಪಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿವೆ. ಪಶ್ಚಿಮ ಬಂಗಾಳದ ಸಿಇಒ ಮನೋಜ್ ಅಗರ್ವಾಲ್ ಅವರನ್ನು ಮೇ 12ರಂದು ಅಲ್ಲಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಕ್ರಮವನ್ನು ಟೀಕಿಸಿದ್ದ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಉಭಯ ಪಕ್ಷಗಳು ವ್ಯಂಗ್ಯವಾಡಿವೆ. “ದೊಡ್ಡ ಕಳ್ಳತನ ಮಾಡಿದಷ್ಟೂ ದೊಡ್ಡ ಬಹುಮಾನ” ಎಂದು ರಾಹುಲ್ ವ್ಯಂಗ್ಯವಾಡಿದ್ದರು.

ಕೇರಳ ಸಿಪಿಎಂ ಮುಖಂಡ ಪಿ. ರಾಜೀವ್ ಈ ಬೆಳವಣಿಗೆಯನ್ನು ಗಂಭೀರ ವಿಷಯ ಎಂದು ಬಣ್ಣಿಸಿದ್ದಾರೆ. ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲು ಇತರ ಎಲ್ಲ ಕರ್ತವ್ಯಗಳಿಂದ ಮುಕ್ತಗೊಳಿಸಿದ ಬಳಿಕ ಐಎಎಸ್ ಅಧಿಕಾರಿಯನ್ನು ಸಿಇಒ ಆಗಿ ನಿಯೋಜಿಸಲಾಗುತ್ತದೆ. ರಾಹುಲ್ ಹೇಳಿಕೆ ಹಿನ್ನೆಲೆಯಲ್ಲಿ ಅದೇ ವ್ಯಕ್ತಿಯನ್ನು ಸಿಎಂ ಕಾರ್ಯದರ್ಶಿಯಾಗಿ ನೇಮಿಸಿರುವುದು ಗಂಭೀರ ವಿಚಾರ” ಎಂದು ಹೇಳಿದ್ದಾರೆ. ಕೇರಳ ನೇಮಕಾತಿ ಬಗ್ಗೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ನ ರಾಷ್ಟ್ರೀಯ ನಾಯಕತ್ವ ತನ್ನ ನಿಲುವು ಸ್ಪಷ್ಟಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ರಾಹುಲ್ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್ ಎಕ್ಸ್ ಪೋಸ್ಟ್ನಲ್ಲಿ, ಕೇರಳದಲ್ಲಿ ಆದದ್ದೇನು? ಇದು ಕೂಡಾ ಕಳ್ಳತನಕ್ಕೆ ಸಂದ ಬಹುಮಾನವೇ ಎಂದು ಅಣಕವಾಡಿದ್ದಾರೆ.


